ಮೂರು ದಿನದಲ್ಲಿ ಮಹದಾಯಿ ಬಗ್ಗೆ ಪ್ರಧಾನಿ ಮೋದಿ ಭರವಸೆ ನೀಡದಿದ್ದರೆ ಬಂದ್ ನಿಶ್ಚಿತ ಬೆಂಗಳೂರು ಬಂದ್‌ಗೆ ಅನುಮತಿ ಇಲ್ಲ: ರಾಮಲಿಂಗಾರೆಡ್ಡಿ ಬಂದ್‌ಗೆ ಸರ್ಕಾರದ ಷಡ್ಯಂತ್ರ: ಅನಂತಕುಮಾರ್

ಬೆಂಗಳೂರು: ಮಹದಾಯಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವ ಬಗ್ಗೆ ಬಿಜೆಪಿಯವರು ಫೆ.3ರೊಳಗೆ ಭರವಸೆ ನೀಡದಿದ್ದರೆ, ಫೆ. 4ರಂದು ಬೆಂಗಳೂರು ಬಂದ್ ನಡೆಸಲಾಗುವುದು ಎಂದು ಕನ್ನಡ ಒಕ್ಕೂಟ ಸ್ಪಷ್ಟಪಡಿಸಿದೆ.

Add Asianetnews Kannada as a Preferred SourcegooglePreferred

ಮಹದಾಯಿ ಹೋರಾಟಗಾರರ ವಿಚಾರವನ್ನು ಪ್ರಧಾನಿಗೆ ಮುಟ್ಟಿಸಲೇಬೇಕು. ಇಲ್ಲವಾದಲ್ಲಿ ಕಳೆದ 3 ವರ್ಷಗಳ ನಿರಂತರ ಹೋರಾಟಕ್ಕೆ ಬೆಲೆ ಇಲ್ಲದಂತಾಗುತ್ತದೆ. ಫೆ.4ರಂದು ಪರಿವರ್ತನಾ ಯಾತ್ರೆ ಸಮಾರೋಪದ ವೇಳೆ ಪ್ರಧಾನಿ ಈ ಬಗ್ಗೆ ಮಾತನಾಡಲಿದ್ದಾರೆ ಎಂಬ ಭರವಸೆ ನೀಡಿದರೆ ಮಾತ್ರ ಹೋರಾಟದಿಂದ ಹಿಂದೆ ಸರಿಯಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಉತ್ತರ ಕರ್ನಾಟಕದ ಜನರ ಹಿತದೃಷ್ಟಿ ಯಿಂದ ನಡೆಸಿರುವ ಹೋರಾಟಕ್ಕೆ ಬೆಲೆ ಸಿಗಬೇಕಾದರೆ, ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಬೇಕು. ಜ.25ರ ಬಂದ್ ಯಶಸ್ವಿಯಾಗಿದ್ದು, ಫೆ.4ರಂದೂ ಬಂದ್ ನಡೆಯಲಿದೆ. ರಾಜ್ಯದ ಹಿತಕ್ಕಾಗಿ ನಿರಂತರವಾಗಿ ಹೋರಾಟ ನಡೆಯಲಿದೆ ಎಂದರು.

ಬೆಂಗಳೂರು ಬಂದ್‌ಗೆ ಅನುಮತಿ ಇಲ್ಲ

ಭಾನುವಾರ ಬಂದ್ ಆಚರಣೆಗೆ ಸರ್ಕಾರ ಅನುಮತಿ ನೀಡಿಲ್ಲ. ಹೋರಾಟಗಾರರು ಬೇಕಿದ್ದರೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುವಂತೆ ಸೂಚಿಸಿದ್ದೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈ ಬಂದ್ ಕರೆಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಆದರೂ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ. ನರೇಂದ್ರ ಮೋದಿ ಬಿಜೆಪಿಯವರಿಗೆ ಮಾತ್ರ ಪ್ರಧಾನಿ ಅಲ್ಲ. ನಮಗೂ ಪ್ರಧಾನಿಗಳೇ ಎಂದು ಅವರು ಹೇಳಿದ್ದಾರೆ.

ಬಂದ್‌ಗೆ ಸರ್ಕಾರದ ಷಡ್ಯಂತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಫೆ.4ರಂದು ರಾಜ್ಯಕ್ಕೆ ಭೇಟಿ ನೀಡುವ ದಿನದಂದು ಮಹದಾಯಿ ವಿಚಾರವಾಗಿ ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್ ನಡೆಸಲು ಮುಂದಾಗಿರುವುದರ ಹಿಂದೆ ರಾಜ್ಯ ಸರ್ಕಾರದ ಕುಮ್ಮಕ್ಕು ಮತ್ತು ಷಡ್ಯಂತ್ರ ಅಡಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಆಪಾದಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಂದು ಸರ್ಕಾರಿ ಪ್ರಾಯೋಜಿತ ಬಂದ್ ನಡೆಸಲು ಮುಂದಾದರೆ, ಅದು ಯಶಸ್ವಿಯಾಗುವುದಿಲ್ಲ ಬದಲಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಬಂದ್ ಆಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಜ.25ರಂದು ರಾಜ್ಯಕ್ಕೆ ಭೇಟಿ ನೀಡಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಸರ್ಕಾರಿ ಪ್ರಾಯೋಜಿತ ಕರ್ನಾಟಕ ಬಂದ್ ಮಾಡಲಾಯಿತು ಎಂದು ಕಿಡಿ ಕಾರಿದರು.