ಪ್ರಧಾನಿ ಮೋದಿ ಭಾಷಣದ ಲೈವ್ ಟೆಲಿಕಾಸ್ಟ್ ಮಾಡುವ ಯೋಜನೆಯನ್ನು ನಿರ್ಲಕ್ಷ್ಯಿಸುವ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರಕ್ಕೆ ಸಡ್ಡುಹೊಡೆದಿದೆ.
ಕೋಲ್ಕತ್ತಾ: ಪ್ರಧಾನಿ ಮೋದಿ ಭಾಷಣದ ಲೈವ್ ಟೆಲಿಕಾಸ್ಟ್ ಮಾಡುವ ಯೋಜನೆಯನ್ನು ನಿರ್ಲಕ್ಷ್ಯಿಸುವ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರಕ್ಕೆ ಸಡ್ಡುಹೊಡೆದಿದೆ.
ಶಿಕಾಗೋದಲ್ಲಿ ನಡೆದ ಜಾಗತಿಕ ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ್ದ ಭಾಷಣದ 125ನೇ ವಾರ್ಷಿಕಾಚರಣೆಯನ್ನು ಸೆ.11ರಂದು ಕೇಂದ್ರ ಸರ್ಕಾರವು ಅದ್ದೂರಿಯಾಗಿ ನಡೆಸಲು ಯೋಜಿಸಿದೆ. ಆ ಸಂದರ್ಭದಲ್ಲಿ ‘ನ್ಯೂ ಇಂಡಿಯಾ ಮಿಶನ್’ ಕುರಿತು ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ವಿದ್ಯಾರ್ಥಿಗಳಿಗೆ ‘ಸಂಕಲ್ಪ್ ಸೇ ಸಿದ್ದಿ’ ಪ್ರತಿಜ್ಞೆಯನ್ನು ಬೋಧಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಎಲ್ಲಾ ವಿವಿಗಳು/ಕಾಲೆಜುಗಳು ನೇರಪ್ರಸಾರ ಮಾಡಬೇಕು ಎಂದು ನಿರ್ದೇಶಿಸಿ ಯುಜಿಸಿ ದೇಶದ 40 ಸಾವಿರ ವಿ/ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿದೆ.
ಆದರೆ ಪಶ್ಚಿಮ ಬಂಗಾಳ ಸರ್ಕಾರವು ಯುಜಿಸಿಯ ನಿರ್ದೇಶನವನ್ನು ನಿರ್ಲಕ್ಷಿಸುವಂತೆ ರಾಜ್ಯದ ಕಾಲೇಜುಗಳಿಗೆ ಹೇಳಿದೆ.
‘ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸದೇ ಕೇಂದ್ರ ಸರ್ಕಾರವು ಈ ರೀತಿ ಮಾಡುವಂತಿಲ್ಲ. ಇದು ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರ’ ಎಂದು ಹೇಳಿರುವ ಶಿಕ್ಷಣ ಸಚಿವ ಪಾರ್ಥ ಚಟರ್ಜಿ, ಯುಜಿಸಿ ಸುತ್ತೋಲೆಯಿಂದ ಕಾಲೇಜು/ವಿವಿಗಳಿಗೆ ಆಶ್ಚರ್ಯವಾಗಿದೆ. ಅವರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಯುಜಿಸಿ ನಿರ್ದೆಶನವನ್ನು ಪಾಲಿಸುವುದು ಕಡ್ಡಾಯವೇನಲ್ಲ ಎಂದು ಅವರಿಗೆ ತಿಳಿಸಿದ್ದೇವೆ, ಎಂದು ಹೇಳಿದ್ದಾರೆ.
