ಕೋಲ್ಕತ್ತಾ(ಜು.09): ಲೋಕಸಭಾ ಚುನಾವಣೆಯಲ್ಲಿ ಪ.ಬಂಗಾಳದಲ್ಲಿ ಪಕ್ಷ ಹೀನಾಯ ಸೋಲು ಕಂಡ ಪರಿಣಾಮ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮೆನ್ ಮಿತ್ರಾ ರಾಜೀನಾಮೆ ಸಲ್ಲಿಸಿದ್ದಾರೆ.

ಚುನಾವಣೆಯಲ್ಲಿ ಕಳಪೆ ಸಾಧನೆಯ ಜವಾಬ್ದಾರಿ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಸೋಮೆನ್ ಮಿತ್ರಾ ಸ್ಪಷ್ಟಪಡಿಸಿದ್ದಾರೆ. 

ಆದರೆ ಸೋಮೆನ್ ಮಿತ್ರಾ ರಾಜೀನಾಮೆಯನ್ನು ರಾಜ್ಯದ ಉಸ್ತುವಾರಿ ಗೌರವ್ ಗೊಗೊಯ್ ಮಿತ್ರಾ ಸ್ವೀಕರಿಸಿಲ್ಲ. ಸೋಮೆನ್ ರಾಜೀನಾಮೆಯನ್ನು ತಿರಸ್ಕರಿಸಿರುವ ಗೌರವ್, ಪಕ್ಷದ ಅಧ್ಯಕ್ಷರಾಗಿ ಮುಂದುವರೆಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳ ಪೈಕಿ, ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿತ್ತು. ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಈಗಾಗಲೇ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಪಾಳಯದಲ್ಲಿ ಇದೀಗ ರಾಜೀನಾಮೆ ಪರ್ವ ಪ್ರಾರಂಭವಾಗಿದೆ.