ನವದೆಹಲಿ :  ಜಲಮಾಲಿನ್ಯದ ಕಾರಣಕ್ಕೆ ಇಡೀ ದೇಶದಲ್ಲಿ ಸುದ್ದಿ ಮಾಡಿದ ಬೆಂಗಳೂರಿನ ಬೆಳ್ಳಂದೂರು ಕೆರೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಕರ್ನಾಟಕ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಕೆರೆಯನ್ನು ಶುದ್ಧಿ ಮಾಡಲು ವಿಫಲವಾಗಿದ್ದಕ್ಕೆ ಕರ್ನಾಟಕ ಸರ್ಕಾರಕ್ಕೆ 50 ಕೋಟಿ ರುಪಾಯಿ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ 25 ಕೋಟಿ ರುಪಾಯಿ ದಂಡ ವಿಧಿಸಿ ಅದು ಆದೇಶ ಹೊರಡಿಸಿದೆ. ಈ ಹಣವನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕಟ್ಟುವಂತೆ ಅದು ಸೂಚಿಸಿದ್ದು, ಈ ಹಣವನ್ನು ಪರಿಸರ ಪುನರುಜ್ಜೀವನಕ್ಕೆ ಬಳಸಿಕೊಳ್ಳುವಂತೆ ಹೇಳಿದೆ.

ಇದೇ ವೇಳೆ, ಕೆರೆಯ ಶುದ್ಧೀಕರಣ ಉದ್ದೇಶಕ್ಕಾಗಿ ಬ್ಯಾಂಕ್‌ ಖಾತೆ (ಪ್ರತ್ಯೇಕ ಖಾತೆ) ತೆರೆದು 500 ಕೋಟಿ ರುಪಾಯಿ ಠೇವಣಿ ಇಡಬೇಕು. ಈ ಹಣವನ್ನು ಕೆರೆಯ ಶುದ್ಧೀಕರಣದ ಉದ್ದೇಶಕ್ಕೆ ಬಳಸಬೇಕು ಎಂದೂ ಆದೇಶಿಸಿದೆ. ಒಂದು ವೇಳೆ ತನ್ನ ಆದೇಶ ಪಾಲನೆಗೆ ಸರ್ಕಾರ ವಿಫಲವಾದರೆ ಇನ್ನೂ 100 ಕೋಟಿ ರು. ಕಟ್ಟಬೇಕು ಎಂದು ನ್ಯಾಯಾಧಿಕರಣ ಎಚ್ಚರಿಸಿದೆ.

ಸರ್ಕಾರ, ಬಿಬಿಎಂಪಿಗೆ ಚಾಟಿ:  ಬೆಳ್ಳಂದೂರು ಕರೆ ಮಲಿನಗೊಂಡು ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ ಸೇರಿದಂತೆ ಹಲವು ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಾಧಿಕರಣದ ಅಧ್ಯಕ್ಷ ನ್ಯಾ. ಆದರ್ಶಕುಮಾರ್‌ ಗೋಯಲ್‌ ಅವರು, ‘ಬೆಳ್ಳಂದೂರು ಕೆರೆಯ ರಕ್ಷಣೆ ಮತ್ತು ಪುನರುಜ್ಜೀವನದಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ. ಶುದ್ಧೀಕರಿಸದ ಒಳಚರಂಡಿ ನೀರು ಕೆರೆಗೆ ಇನ್ನೂ ಬರುತ್ತಲೇ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿತು.

ಇನ್ನು ಬೆಳ್ಳಂದೂರು ಕೆರೆ ಹಾಗೂ ರಾಜಾಕಾಲುವೆಗಳ ಒತ್ತುವರಿಯ ಬಗ್ಗೆಯೂ ಪ್ರಸ್ತಾಪಿಸಿದ ನ್ಯಾ. ಗೋಯಲ್‌, ‘ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗಳು ಬೆಳ್ಳಂದೂರು ಕರೆ ಹಾಗೂ ರಾಜಾಕಾಲುವೆ ಅತಿಕ್ರಮಣ ತಡೆಯಲು ವಿಫಲವಾಗಿವೆ. ಕೆರೆ ಜಲಾನಯನ ಪ್ರದೇಶದ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸಬೇಕು’ ಎಂದು ಆದೇಶಿಸಿತು.

ಇನ್ನು ತನ್ನ ಆದೇಶ ಪಾಲನೆ ಆಗುವುದನ್ನು ನೋಡಿಕೊಳ್ಳಲು ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ, ಐಐಎಸ್ಸಿಯ ನಿವೃತ್ತ ಪ್ರಾಧ್ಯಾಪಕ ಟಿ.ವಿ. ರಾಮಚಂದ್ರನ್‌ ಹಾಗೂ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಓರ್ವ ಸದಸ್ಯರನ್ನು ಒಳಗೊಂಡ ಉಸ್ತುವಾರಿ ಸಮಿತಿ ರಚಿಸಿದ ನ್ಯಾಯಾಧಿಕರಣ, ಬೆಳ್ಳಂದೂರು ಕೆರೆಯ ಪುನರುತ್ಥಾನಕ್ಕೆ 1 ತಿಂಗಳಲ್ಲಿ , ಕಾಲಮಿತಿಯ ಕ್ರಿಯಾಯೋಜನೆ ಸಿದ್ಧಪಡಿಸಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿತು.

ಈ ಹಿಂದೆಯೂ ಕೂಡ ಬೆಳ್ಳಂದೂರು ಕರೆ ವಿಚಾರದಲ್ಲಿ ನ್ಯಾಯಾಧಿಕರಣವು ಹಲವು ಆದೇಶಗಳನ್ನು ನೀಡಿತ್ತು. ಆದರೆ ಅವುಗಳ ಜಾರಿಯಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಅಂಥವರನ್ನು ಗುರುತಿಸಬೇಕು. ಮಾಲಿನ್ಯ ಮಾಡುವವರು ದಂಡ ತೆರಬೇಕು ಎಂಬ ತತ್ವದ ಆಧಾರದಲ್ಲಿ, ಜವಾಬ್ದಾರಿ ನಿಭಾಯಿಸದೇ ಹೋದರೆ ಸಂಬಂಧಿಸಿದ ಉಸ್ತುವಾರಿ ಅಧಿಕಾರಿಗಳೇ ಹೊಣೆ ಎಂದು ನ್ಯಾ. ಗೋಯಲ್‌ ಹೇಳಿದರು. 

‘ಸಂವಿಧಾನದ 12ನೇ ಪರಿಚ್ಛೇದದಲ್ಲಿ ನಗರ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಉಲ್ಲೇಖಿಸಲಾಗಿದ್ದು, ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತದ ಹೊಣೆ. ಜಲಮಾಲಿನ್ಯ ಮಾಡುವುದು ಅಪರಾಧ. ಆದರೆ ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿ ವಿಫಲವಾಗಿವೆ’ ಎಂದು ಕಿಡಿಕಾರಿದರು.

ಕೆರೆ ಮಾಲಿನ್ಯ ಮಾಡಿದವರಿಂದ ದಂಡ ವಸೂಲು ಮಾಡಲು ಮಾರ್ಗದರ್ಶಿ ನಿಯಮಗಳನ್ನು ರೂಪಿಸುವಂತೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಎನ್‌ಜಿಟಿ ತಾಕೀತು ಮಾಡಿತು.

ವೆಬ್‌ಸೈಟ್‌ ರೂಪಿಸಿ:  ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಸಂಬಂಧಿಸಿದಂತೆ ವೆಬ್‌ಸೈಟ್‌ ಒಂದನ್ನು ರೂಪಿಸಬೇಕು. ಆ ವೆಬ್‌ಸೈಟ್‌ ಮೂಲಕ ಜನರು ಸಲಹೆ-ದೂರು ನೀಡಬಹುದು ಎಂದೂ ನ್ಯಾಯಮೂರ್ತಿಗಳು ಹೇಳಿದರು.