ಬೆಂಗಳೂರು [ಜು.27] :  ಅನರ್ಹತೆಗೊಳಗಾಗಿರುವ ಕಾಂಗ್ರೆಸ್‌ನ ಮಾಜಿ ಶಾಸಕ, ಹಿರಿಯ ನಾಯಕ ರಮೇಶ್‌ ಜಾರಕಿಹೊಳಿ ಅವರಿಗೆ ಬೆಳಗಾವಿ ಜಿಲ್ಲೆಯ ಪ್ರಭಾವಿ ಬಿಜೆಪಿ ಮುಖಂಡರು ಹಾಗೂ ಹಿರಿಯ ಶಾಸಕರು ಸ್ವಾಗತ ಕೋರಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಬೆಳಗಾವಿ ಜಿಲ್ಲೆಯ ಬಿಜೆಪಿ ಹಿರಿಯ ಶಾಸಕರಾದ ಉಮೇಶ್‌ ಕತ್ತಿ ಮತ್ತು ಅಭಯ್‌ ಪಾಟೀಲ್‌ ಅವರು, ಕಾಂಗ್ರೆಸ್‌ ನಾಯಕ ರಮೇಶ ಜಾರಕಿಹೊಳಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು ಸ್ಪಷ್ಟಪಡಿಸಿದರು.

ಮೊದಲಿನಿಂದಲೂ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಎಂಬ ಭೇದವಿಲ್ಲ. ನಾವೆಲ್ಲಾ ಸಹಕಾರ ಕ್ಷೇತ್ರದಲ್ಲಿ ಬೆಳೆದು ಬಂದವರು. ನಮ್ಮ ನಡುವೆ ಪರಸ್ಪರ ಹೊಂದಾಣಿಕೆ ಇದೆ. ಮುಂದೆಯೂ ಕೂಡಾ ಅದೇ ಸಹಕಾರದಲ್ಲೇ ಜಿಲ್ಲೆಯ ಪ್ರಗತಿಗೆ ಶ್ರಮಿಸುತ್ತೇವೆ ಎಂದು ಹುಕ್ಕೇರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಉಮೇಶ್‌ ಕತ್ತಿ ಹೇಳಿದರು.

ಕಾಂಗ್ರೆಸ್‌ ನಾಯಕ ರಮೇಶ್‌ ಜಾರಕಿಹೊಳಿ ಅವರ ಪಕ್ಷ ಸೇರ್ಪಡೆಗೆ ನಮ್ಮ ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಮ್ಮ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಯಡಿಯೂರಪ್ಪನವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಮಾತನಾಡಿದ ಬೆಳಗಾವಿ ನಗರ ಕ್ಷೇತ್ರದ ಶಾಸಕ ಅಭಯ್‌ ಪಾಟೀಲ್‌ ಅವರು, ಬೆಳಗಾವಿ ಜಿಲ್ಲೆಯಿಂದ ಉಮೇಶ್‌ ಕತ್ತಿ ಮತ್ತು ಜಾರಕಿಹೊಳಿ ಅವರಿಗೆ ಮಂತ್ರಿಗಿರಿ ಸಿಗುವುದು ನಿಶ್ಚಿತವಾಗಿದೆ. ಹಾಗಾಗಿ ನಾನು ಸಚಿವ ಸ್ಥಾನದ ಹಕ್ಕು ಮಂಡಿಸುವುದಿಲ್ಲ ಎಂದರು.

ಬೆಳಗಾವಿ ನಗರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದೆ. ಬೆಂಗಳೂರಿನಲ್ಲಿ ಯುವಕರಿಗೆ ಸಿಗುವ ಉದ್ಯೋಗಾವಕಾಶಗಳು ನಮ್ಮಲ್ಲಿ ಸಹ ಲಭಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಪಕ್ಷದ ನಾಯಕರು ಸಹಕಾರ ಮತ್ತು ಯಡಿಯೂರಪ್ಪನವರ ನೆರವಿನಿಂದ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.