ಮಹಾರಾಷ್ಟ್ರ[ಅ.06]: 2016ರಲ್ಲಿ ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನ ಭಾಗಕ್ಕೆ ಪ್ರವೇಶಿಸಿ ಪಾಕ್‌ನಿಂದ ಬಂಧಿಯಾಗಿ ಬಿಡುಗಡೆಯಾಗಿದ್ದ ಭಾರತೀಯ ಯೋಧ ಚಂದು ಚವಾಣ್‌, ಸೇನೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

‘ಭಾರತೀಯ ಸೇನೆಯಲ್ಲಿನ ಕಿರುಕುಳವೇ ನನ್ನ ರಾಜೀನಾಮೆಗೆ ಕಾರಣ. ಪಾಕಿಸ್ತಾನದಿಂದ ಬಿಡುಗಡೆಯಾಗಿ ಬಂದಾಗಿನಿಂದ ನನಗೆ ಸೇನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ನನ್ನನ್ನು ಸಂದೇಹದಿಂದ ನೋಡುತ್ತಿದ್ದರು. ಹೀಗಾಗಿ ನಾನು ಪದತ್ಯಾಗಕ್ಕೆ ನಿರ್ಧರಿಸಿದೆ’ ಎಂದು ಚವಾಣ್‌ ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ಅಹ್ಮದ್‌ನಗರದಲ್ಲಿರುವ ತಮ್ಮ ಸೇನಾ ಘಟಕದ ಕಮಾಂಡರ್‌ಗೆ ಚಂದು ಚವಾಣ್‌ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

2016ರಲ್ಲಿ ಚವಾಣ್‌ ಅವರು ಅಚಾನಕ್ಕಾಗಿ ಗಡಿ ದಾಟಿದ ಕೂಡಲೇ ಅವರನ್ನು ಪಾಕಿಸ್ತಾನ ಸೈನಿಕರು ಸೆರೆ ಹಿಡಿದು, 4 ತಿಂಗಳು ಬಂಧನದಲ್ಲಿ ಇರಿಸಿಕೊಂಡಿದ್ದರು. ಚಂದುಗೆ ಹೊಡೆದು ಪ್ರಾಣಾಂತಿಕ ಹಲ್ಲೆ ನಡೆಸಿ, ಕೊನೆಗೆ ಭಾರತದ ಆಗ್ರಹದ ಮೇರೆಗೆ ಬಿಡುಗಡೆ ಮಾಡಲಾಗಿತ್ತು.

ಈ ನಡುವೆ, ಕಳೆದ ತಿಂಗಳಷ್ಟೇ ಚವಾಣ್‌ ಧುಳೆ ಬಳಿ ದ್ವಿಚಕ್ರ ವಾಹನ ಚಲಾಯಿಸುವ ವೇಳೆ ರಸ್ತೆ ಗುಂಡಿಯ ಕಾರಣ ಅಪಘಾತಕ್ಕೆ ತುತ್ತಾಗಿ, ತಲೆಬುರುಡೆ, ಗದ್ದ, ಹುಬ್ಬು, ತುಟಿ ಹಾಗೂ ಮುಖಕ್ಕೆ ಗಾಯಗಳಾಗಿದ್ದವು. 4 ಹಲ್ಲು ಕೂಡ ಮುರಿದುಕೊಂಡಿದ್ದರು.