Asianet Suvarna News Asianet Suvarna News

ಕಂಗ್ರಾಟ್ಸ್.. ನೀವು 8 ಕೋಟಿ ಲಾಟರಿ ಗೆದ್ದಿದ್ದೀರಾ ಎಂಬ ಸಂದೇಶಗಳು ನಿಮಗೂ ಬಂದಿವೆಯಾ..?

‘‘ಅಭಿನಂದನೆಗಳು ನಿಮಗೆ. ನಿಮಗೆ ಲಾಟರಿಯಲ್ಲಿ 8 ಕೋಟಿ ಬಹುಮಾನ ಬಂದಿದೆ. ಅದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆ ವಿವರ ಕೊಡಿ,’’

becareful about cheating messages about lottery

‘‘ಅಭಿನಂದನೆಗಳು ನಿಮಗೆ. ನಿಮಗೆ ಲಾಟರಿಯಲ್ಲಿ 8 ಕೋಟಿ ಬಹುಮಾನ ಬಂದಿದೆ. ಅದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆ ವಿವರ ಕೊಡಿ,’’ ಹೀಗೆ ಹೇಳುವ ಎಸ್‌ಎಂಎಸ್ ಮೊಬೈಲ್‌ಗೆ ಬರುವುದು ಈಗ ಸಾಮಾನ್ಯ. ಇದರಿಂದ ನಾವು ಎಚ್ಚರಿಕೆಯಲ್ಲಿರಬೇಕು. ಇಂಥ ವಂಚನೆಯ ಪ್ರಕರಣಗಳು ನಮ್ಮ ರಾಜ್ಯದಲ್ಲೂ ಸಾಕಷ್ಟು ನಡೆದಿವೆ. ನೀವು ಗೆದ್ದ ಬಹುಮಾನ ಪಡೆಯಲು ಯಾವುದೋ ಬ್ಯಾಂಕ್ ಖಾತೆಗೆ ನಿರ್ದಿಷ್ಟ ಮೊತ್ತವನ್ನು ತುಂಬಬೇಕು ಅಥವಾ ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ನೀಡಬೇಕು ಎಂದು ಹೇಳುವ ಮೂಲಕ ನಿಮ್ಮಿಂದಲೇ ದುಡ್ಡು ಕಸಿಯುವ ಪ್ರಯತ್ನವಿದು ಎಂಬುದನ್ನು ತಿಳಿಯದೆ ಗ್ರಾಹಕರು ವಂಚನೆಗೊಳಗಾಗುತ್ತಾರೆ.

ಈ ವಂಚಕ ಜಾಲ ಹೇಗೆ ಕೆಲಸ ಮಾಡುತ್ತದೆ?:

-ನೀವೊಂದು ಲಾಟರಿಯಲ್ಲಿ ಬಹುಮಾನ ಗೆದ್ದಿದ್ದೀರಿ ಅಥವಾ ಒಂದು ಸ್ಪರ್ಧೆಯಲ್ಲಿ (ನೀವು ಭಾಗವಹಿಸಿಯೇ ಇರುವುದಿಲ್ಲ) ದೊಡ್ಡ ಮೊತ್ತದ ಬಹುಮಾನ ಗೆದ್ದಿದ್ದೀರಿ ಎಂದು ಮೈಲ್, ಟೆಲಿೆನ್ ಕರೆ, ಎಸ್‌ಎಂಎಸ್ ಅಥವಾ ಸೋಶಿಯಲ್ ಮೀಡಿಯಾ ಮೂಲಕ ಸಂದೇಶ ಬರುತ್ತದೆ. ಅವರು ಹೇಳುವ ಬಹುಮಾನ ಹಾಲಿಡೇ ಟ್ರಿಪ್, ಎಲೆಕ್ಟ್ರಾನಿಕ್ ಸಾಧನಗಳು ಯಾವುದೇ ಇರಬಹುದು.

-ನಂತರ ಆ ಬಹುಮಾನ ಪಡೆಯಲು ಒಂದು ಶುಲ್ಕ ಪಾವತಿಸುವಂತೆ ಹೇಳಲಾಗುತ್ತದೆ. ಆ ಬಹುಮಾನದ ಮೊತ್ತ ಅಥವಾ ಪರಿಕರವನ್ನು ನಿಮಗೆ ತಲುಪಿಸಲು ತಗಲುವ ವಿಮಾ ವೆಚ್ಚ, ಸರ್ಕಾರಿ ತೆರಿಗೆಗಳು, ಬ್ಯಾಂಕ್ ಫೀಸ್ ಅಥವಾ ಕೊರಿಯರ್ ಚಾರ್ಜ್ ಮತ್ತಿತರ ಹೆಸರಲ್ಲಿ ಗ್ರಾಹಕರಿಂದ ಆನ್‌ಲೈನ್ ಮೂಲಕವೇ ದುಡ್ಡು ಪೀಕಿಸುತ್ತಾರೆ.

-ಇದರೊಂದಿಗೆ ವಂಚಕರು ನೀವು ಕರೆ ಮಾಡುವ ಸಂಖ್ಯೆಯ ಮೂಲಕ ಅವರು ಪ್ರೀಮಿಯಂ ರೇಟ್ ಲಾಭ ಪಡೆಯುತ್ತಾರೆ. ನೀವು ಎಷ್ಟು ಹೆಚ್ಚು ಹೊತ್ತು ಆ ನಂಬರ್‌ನಲ್ಲಿ ಮಾತನಾಡುತ್ತೀರೋ ಅಷ್ಟರ ಮಟ್ಟಿಗೆ ಅವರಿಗೆ ಲಾಭವಿರುತ್ತದೆ.

-ಬಹುಮಾನ ಪಡೆಯಲು ಅಗತ್ಯ ದುಡ್ಡನ್ನು ಶೀಘ್ರವಾಗಿ ಅವರಿಗೆ ಪಾವತಿಸುವಂತೆ ಹಾಗೂ ಬಹುಮಾನ ಬಂದ ವಿಚಾರವನ್ನು ಗೌಪ್ಯವಾಡಿ ಇಡುವಂತೆ ಅವರು ವಿನಂತಿಸುವುದೂ ಕೂಡಾ ವಂಚನೆಯ ಒಂದು ಭಾಗ. ಈ ಮೂಲಕ ಇತರರು ನೀವು ವಂಚನೆಗೊಳಗಾಗುವುದನ್ನು ಗಮನಕ್ಕೆ ತರುವ ಸಾಧ್ಯತೆಯನ್ನು ವಂಚಕರು ತಪ್ಪಿಸುತ್ತಾರೆ.

-ಸಾಧಾರಣವಾಗಿ ವಂಚಕರು ವಿದೇಶಿ (ಸ್ಪ್ಯಾನಿಶ್ ಇತ್ಯಾದಿ) ಲಾಟರಿಗಳ ಹೆಸರಿನಲ್ಲಿ ವಂಚಿಸುತ್ತಾರೆ. ಆ ಮೂಲಕ ಆನ್‌ಲೈನ್‌ನಲ್ಲಿ ಹುಡುಕಿದಾಗಲೂ ಅದು ನೈಜವೆಂದು ಕಾಣುವಂತೆ ಮಾಡುತ್ತಾರೆ.

-ನೀವು ನಿಜವಾದ ಲಾಟರಿ ವಿಜೇತರೆಂದು ದೃಢಪಡಿಸುವ ಉದ್ದೇಶದಿಂದ ನಿಮ್ಮ ಬ್ಯಾಂಕ್ ಖಾತೆಯ ವಿವರ ಹಾಗೂ ಖಾಸಗಿ ಮಾಹಿತಿ ನೀಡುವಂತೆ ಕೇಳುತ್ತಾರೆ. ಬಳಿಕ ಆ ಮಾಹಿತಿ ಬಳಸಿ ನಿಮ್ಮ ಖಾತೆಗೇ ಕನ್ನ ಹಾಕುತ್ತಾರೆ.

-ವಂಚಕರು ನಿಮ್ಮನ್ನು ನಂಬಿಸಲು ನಿರ್ದಿಷ್ಟ ಮೊತ್ತದ ಡಾಲರ್‌ಗಳನ್ನು ಬಹುಮಾನ ಮೊತ್ತವಾಗಿ ನಮೂದಿಸಿ ಚೆಕ್ ಕಳುಹಿಸುತ್ತಾರೆ. ನಂತರ ಆ ಚೆಕ್ ಬೌನ್ಸ್ ಆದಾಗಲೇ ವಂಚನೆ ಬೆಳಕಿಗೆ ಬರುತ್ತದೆ. ಆ ವೇಳೆಗೆ ನಿಮ್ಮ ದುಡ್ಡು ವಂಚನೆಯಾಗಿರುತ್ತದೆ.

-ನಿಮ್ಮನ್ನು ನಂಬಿಸುವ ಉದ್ದೇಶದಿಂದ ‘ಬಹಳಷ್ಟು ಇಮೇಲ್ ವಿಳಾಸಗಳಿಂದ ನಿಮ್ಮ ಹೆಸರು ಆರಿಸಿ’ ಬಹುಮಾನಕ್ಕೆ ಪಾತ್ರರಾಗಿದ್ದೀರಿ ಎಂದು ಸುಳ್ಳು ಹೇಳುತ್ತಾರೆ. ಈ ಬಹುಮಾನಕ್ಕೆ ಸರ್ಕಾರದ ಅನುಮೋದನೆ ಇದೆ ಎನ್ನುತ್ತಾರೆ. ನಂತರ ಒಂದು ಟಿಕೆಟ್ ಖರೀದಿಸಲು ಅಥವಾ 190ರಂತಹ ಸಂಖ್ಯೆಯಿಂದ ಆರಂಭವಾಗುವ ಪ್ರೀಮಿಯಂ ರೇಟ್ ಫೋನ್ ನಂಬರ್‌ಗೆ ಕರೆ ಮಾಡಲು ಹೇಳುತ್ತಾರೆ.

ನೀವೇನು ಮಾಡಬೇಕು?:

-ಯಾವುದೇ ಬಹುಮಾನ ಪಡೆಯಲು ದುಡ್ಡು ಕಟ್ಟಬೇಕು ಎಂಬಂತಹ ಆರ್‌ಗಳು ಬಂದರೆ ಜಾಗೃತರಾಗಿರಿ. ಯಾವುದೇ ಅಕೃತ ಲಾಟರಿಗಳ ಬಹುಮಾನ ಪಡೆಯಲು ಯಾವುದೇ ಫೀಸ್ ಕಟ್ಟುವ ಪದ್ಧತಿಯಿಲ್ಲ ಎಂಬುದು ನೆನಪಿರಲಿ.

-190 ರಂತಹ ಅಂಕಿಗಳಿಂದ ಆರಂಭವಾಗುವ ಅನುಮಾನಾಸ್ಪದ (ಪ್ರೀಮಿಯಂ ರೇಟ್ ನಂಬರ್) ಸಂಖ್ಯೆಯಿಂದ ಬರುವ ಫೋನ್ ಕರೆಗಳ ಬಗ್ಗೆ ಎಚ್ಚರವಿರಲಿ. ಇಂತಹ ಸಂಖ್ಯೆಗೆ ಮಾಡುವ ಕರೆ ತೀರಾ ದುಬಾರಿ ಎಂಬುದೂ ಗೊತ್ತಿರಲಿ.

-ಯಾವುದೇ ಆರ್‌ಗಳನ್ನು ಒಪ್ಪುವ ಮೊದಲು ಶರತ್ತು ಹಾಗೂ ನಿಯಮಗಳನ್ನು ಜಾಗ್ರತೆಯಿಂದ ಓದಿಕೊಳ್ಳಿ. ಉಚಿತ ಎಂಬ ಆಮಿಷಕ್ಕೆ ಮರುಳಾಗಿ (ಹಿಡನ್ ಕಾಸ್ಟ್‌ಗಳನ್ನು ತಿಳಿಯದೆ) ಕುರುಡರಾಗದಿರಿ.

-ಬಹುಮಾನ ಬಂದಿರುವುದು ನಿಮಗೆ ನಿಜ ಎಂದು ಅನಿಸಿದರೆ ಮುಂದುವರಿಯುವ ಮೊದಲು ಸ್ಥಳೀಯ ಗ್ರಾಹಕ ರಕ್ಷಣಾ ಏಜೆನ್ಸಿಗಳನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

-ನಿಮಗೆ ಬಂದ ಕರೆ ಅಥವಾ ಮೈಲ್ ಕಳುಹಿಸಿದವರ ನೈಜತೆ ಅಥವಾ ಮೂಲವನ್ನು ಇಂಟರ್‌ನೆಟ್ ಅಥವಾ ಟೆಲಿೆನ್ ಸೇವಾ ಪೂರೈಕೆದಾರರ ಮೂಲಕ ಖಚಿತಪಡಿಸಿಕೊಳ್ಳಿ.

-ಯಾವತ್ತೂ ಅನಾಮಧೇಯ ವ್ಯಕ್ತಿಗಳಿಗೆ ಕ್ರೆಡಿಟ್ ಕಾರ್ಡ್ ಮಾಹಿತಿ, ಆನ್‌ಲೈನ್ ಖಾತೆ ಮಾಹಿತಿ ಅಥವಾ ಆಧಾರ್ ಸಂಖ್ಯೆಯಂತಹ ಮಾಹಿತಿಗಳನ್ನು ನೀಡಲೇಬೇಡಿ.

-ಒಂದು ವೇಳೆ ತಪ್ಪಿ ವಂಚಕರಿಗೆ ಬ್ಯಾಂಕ್ ಖಾತೆ ಅಥವಾ ಇನ್ನಿತರ ವೈಯಕ್ತಿಕ ಮಾಹಿತಿ ನೀಡಿದರೆ ತಕ್ಷಣ ನಿಮ್ಮ ಬ್ಯಾಂಕನ್ನು ಸಂಪರ್ಕಿಸಿ ಮುಂದಾಗುವ ಅನಾಹುತ ತಪ್ಪಿಸಿ

-ವಂಚನೆಗೊಳಗಾಗಿ ಆದರೆ ದಯವಿಟ್ಟು ಪೊಲೀಸ್ ಅಥವಾ ಸೈಬರ್ ಕ್ರೈಂ ವಿಭಾಗಕ್ಕೆ ಅಕೃತ ದೂರು ನೀಡುವ ಮೂಲಕ ವಂಚಕರ ಪತ್ತೆಗೆ ಪ್ರಯತ್ನಿಸಿ.

ಈ ಕೆಳಗಿನ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಿ:

1) ಮೊಬೈಲ್ ಅಥವಾ ಕಂಪ್ಯೂಟರ್‌ಗಳಲ್ಲಿ ಸುಧಾರಿತ ಸೆಕ್ಯೂರಿಟಿ ಪ್ಯಾಚಸ್ ಇರುವ ಆಪರೇಟಿಂಗ್ ಸಿಸ್ಟಂಗಳ ಲೇಟೆಸ್ಟ್ ವರ್ಷನ್‌ಗಳನ್ನೇ ಬಳಸಿ

2) ಲೇಟೆಸ್ಟ್ ವರ್ಷನ್‌ಗಳ ಬ್ರೌಸರ್‌ಗಳನ್ನೇ ಬಳಸಿ

3) ಫೈರ್‌ವಾಲ್ ಪ್ರೊಟೆಕ್ಷನ್‌ಗಳನ್ನು ಜಾಗೃತವಾಗಿರಿಸಿ

4) ಆ್ಯಂಟಿವೈರಸ್ ಸಾಫ್ಟ್`ವೇರ್‌ಗಳನ್ನು ಅಪ್‌ಡೇಟ್ ಮಾಡುತ್ತಾ ಇರಿ.

- ಕೃಷ್ಣಮೋಹನ ತಲೆಂಗಳ