Asianet Suvarna News Asianet Suvarna News

ನಾಯಿ ಸಾಕಲು ಲೈಸೆನ್ಸ್ : ಆದೇಶ ರದ್ದು

ನ್ಯಾಯಾಂಗ ಮಧ್ಯಪ್ರವೇಶ ಹಾಗೂ ಸಾರ್ವಜನಿಕರ ವಿರೋಧದಿಂದ ನಾಯಿ ಸಾಕುವ ವಿಚಾರ ಸಂಬಂಧ ವಿವಿಧ ಮಾರ್ಗ ಸೂಚಿಗಳನ್ನು ರಚನೆ ಮಾಡಿ ಬಿಬಿಎಂಪಿ ಹೊರಡಿಸಿದ್ದ ವಿವಾದಿತ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ.

BBMP Withdraws Controversial Order on License To Pet Dogs

ಬೆಂಗಳೂರು : ನ್ಯಾಯಾಂಗ ಮಧ್ಯಪ್ರವೇಶ ಹಾಗೂ ಸಾರ್ವಜನಿಕರ ವಿರೋಧದಿಂದ ನಾಯಿ ಸಾಕುವ ವಿಚಾರ ಸಂಬಂಧ ವಿವಿಧ ಮಾರ್ಗ ಸೂಚಿಗಳನ್ನು ರಚನೆ ಮಾಡಿ ಬಿಬಿಎಂಪಿ ಹೊರಡಿಸಿದ್ದ ವಿವಾದಿತ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ.

ನಗರದಲ್ಲಿ ನಾಯಿ ಸಾಕಲು ಬಿಬಿಎಂಪಿಯಿಂದ ಪರವಾನಗಿ ಪಡೆಯಬೇಕು. ಶುಲ್ಕ ಪಾವತಿಸಿ ಪ್ರತಿ ವರ್ಷ ಪರವಾನಗಿ ನವೀಕರಿಸಿಕೊಳ್ಳಬೇಕು. ಸಾಕು ನಾಯಿಗೆ ಪರವಾನಗಿ ನೀಡುವಾಗ ಬಿಬಿಎಂಪಿ ಪಶು ವೈದ್ಯ ವಿಭಾಗದ ವೈದ್ಯರು ನಾಯಿಯನ್ನು ಪರೀಕ್ಷೆಗೆ ಒಳಪಡಿಸಬಹುದು. ಒಂದು ಮನೆಗೆ ಒಂದೇ ನಾಯಿ ಸಾಕಬೇಕು.

ಕಿವಿಗೆ ಮುದ್ರೆಯಿಲ್ಲದ ನಾಯಿ, ಪರವಾನಗಿ ಪಡೆಯದಿರುವ ನಾಯಿಗಳನ್ನು ವಶಕ್ಕೆ ಪಡೆಯಲಾಗುತ್ತದೆ ಎಂಬುದು ಸೇರಿದಂತೆ ವಿವಿಧ ಮಾರ್ಗಸೂಚಿಗಳನ್ನು ರಚಿಸಿ ಬಿಬಿಎಂಪಿ ಅಧಿಸೂಚನೆ ಹೊರಡಿಸಿತ್ತು. ಬಿಬಿಎಂಪಿಯ ಈ ಅಧಿಸೂಚನೆ ಪ್ರಶ್ನಿಸಿ ನಗರದ ನಿವಾಸಿ ಇಂದಿರಾ ಗೋಪಾಲಕೃಷ್ಣ ಎಂಬುವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಧಿಸೂಚನೆಯ ಕುರಿತು ಹೈಕೋರ್ಟ್ ಹಾಗೂ ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. 

ಇದರಿಂದ ಬಿಬಿಎಂಪಿಯು ಅಧಿಸೂಚನೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆದಿದೆ. ಗುರುವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠಕ್ಕೆ, ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರು, ಅಧಿಸೂಚನೆ ಹಿಂಪಡೆಯುವ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶವನ್ನು ಸಲ್ಲಿಸಿದರು. 

ನಂತರ ವಾದ ಮಂಡಿಸಿದ ಪೊನ್ನಣ್ಣ, ನಗರದ ಪ್ರಾಣಿ ಪ್ರಿಯರು ಹಾಗೂ ಪ್ರಾಣಿ ಪೋಷಕರು ಸಲ್ಲಿಸಿದ್ದ ಹಲವು ಮನವಿಗಳ ಮೇರೆಗೆ ಬಿಬಿಎಂಪಿಯು ಅಧಿಸೂಚನೆಯನ್ನು ಹಿಂಪಡೆದಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸಂಬಂಧಪಟ್ಟವರಿಂದ ಸಲಹೆಗಳನ್ನು ಸ್ವೀಕರಿಸಿ ಮರುಪರಿಶೀಲನೆ ನಡೆಸಿದ ನಂತರ ಹೊಸ ಮಾರ್ಗಸೂಚಿ ರಚಿಸಲಾಗುವುದು ಎಂದು ತಿಳಿಸಿದರು. 

ಈ ಹಿನ್ನೆಲೆಯಲ್ಲಿ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು. ಜತೆಗೆ, ಅಧಿಸೂಚನೆ ಹಿಂಪಡೆದ ಮಾತ್ರಕ್ಕೆ ಯಶಸ್ಸು ಸಿಕ್ಕಿದೆ ಎಂಬುದಾಗಿ ಭಾವಿಸಿ ಅರ್ಜಿದಾರರು ಸುಮ್ಮನೆ ಕೂರಬಾರದು. ಸಮಾಜದ ಬಗೆಗಿನ ಕೆಲಸಗಳು ಇನ್ನಷ್ಟು ರಚನಾತ್ಮಕವಾಗಿ ನಿರ್ವಹಿಸಬೇಕು. ನಾಯಿ ಸಾಕುವ ವಿಚಾರಕ್ಕೆ ಸಂಬಂಧಿಸಿದ ನಿಯಮಗಳಿಗೆ ಸರ್ಕಾರ ಹಾಗೂ ಬಿಬಿಎಂಪಿಗೆ ಅರ್ಜಿದಾರರು ಸಲಹೆ ನೀಡಬಹುದು ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು. ಹಾಗೆಯೇ, ಈ ವಿಚಾರದಲ್ಲಿ ಸಮಗ್ರವಾದ ಬೈಲಾ (ಉಪ ನಿಯಮಗಳು) ರಚನೆ ಮಾಡುವಂತೆ ಸರ್ಕಾರಕ್ಕೆ ಇದೇ ವೇಳೆ ಸಲಹೆ ನೀಡಿತು.

Follow Us:
Download App:
  • android
  • ios