ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಟ್ಟಡ ಮಾಲೀಕರು ತಮ್ಮ ಆಸ್ತಿ ವಿಸ್ತೀರ್ಣವನ್ನು ತಾವೇ ಘೋಷಿಸಿಕೊಂಡು ಅದಕ್ಕೆ ತಕ್ಕಂತೆ ಆಸ್ತಿ ತೆರಿಗೆ ಪಾವತಿಸಲು ಈ ಮೊದಲು ಎಸ್‌ಎಎಸ್‌ ಅಡಿ ಅವಕಾಶ ಮಾಡಿಕೊಡಲಾಗಿದೆ. ಆದರೆ, ಬಹುತೇಕ ಕಟ್ಟಡದ ಮಾಲೀಕರು ಕಟ್ಟಡದ ವಿಸ್ತೀರ್ಣದ ಬಗ್ಗೆ ತಪ್ಪು ಮಾಹಿತಿ ಘೋಷಿಸಿಕೊಂಡಿದ್ದು ವಾಸ್ತವವಾಗಿ ಪಾವತಿಸಬೇಕಾಗಿರುವುದಕ್ಕಿಂತ ಕಡಿಮೆ ತೆರಿಗೆ ಪಾವತಿ ಮಾಡುತ್ತಿದ್ದಾರೆ.
ಬೆಂಗಳೂರು(ಏ.16): ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ (ಎಸ್ಎಎಸ್) ಅಡಿ ಕಟ್ಟಡದ ವಿಸ್ತೀರ್ಣದ ಬಗ್ಗೆ ತಪ್ಪು ಮಾಹಿತಿ ನೀಡಿ ತೆರಿಗೆ ವಂಚಿಸುತ್ತಿರುವ ಮಾಲೀಕರ ವಂಚನೆ ಬಹಿರಂಗಗೊಳಿಸಲು ‘ಡ್ರೋನ್' ಕ್ಯಾಮೆರಾ ನೆರವು ಪಡೆಯುವುದಾಗಿ ಮೇಯರ್ ಜಿ. ಪದ್ಮಾವತಿ ಹೇಳಿದ್ದಾರೆ.
ಕಟ್ಟಡಗಳ ವಿಸ್ತೀರ್ಣ ಪರಿಶೀಲನೆಗೆ ಡ್ರೋನ್ ಬಳಕೆ ಪ್ರಸ್ತಾಪದ ಬಗ್ಗೆ ಪಾಲಿಕೆ ಹಿರಿಯ ಅಧಿಕಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಡ್ರೋನ್ ಬಳಕೆಯಿಂದ ಕಟ್ಟಡ ವಿಸ್ತೀರ್ಣ ಸಮೀಕ್ಷೆ ಸಾಧ್ಯವಿಲ್ಲ. ಇದೊಂದು ಕಾರ್ಯ ರೂಪಕ್ಕೆ ತರಲಾಗದ ಅನಗತ್ಯ ಪ್ರಸ್ತಾವನೆ ಎಂದು ತಳ್ಳಿ ಹಾಕಿದ್ದಾರೆ.
ಒಂದು ವೇಳೆ ಕಟ್ಟಡದ ವಿಸ್ತೀರ್ಣ ತಿಳಿದರೂ ಬಿಬಿಎಂಪಿಯು ಕಟ್ಟಡದ ವಿಸ್ತೀರ್ಣದ ಮೇಲೆ ಮಾತ್ರ ತೆರಿಗೆ ವಿಧಿಸುವುದಿಲ್ಲ. ಆ ಕಟ್ಟಡ ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತಿದೆ ಎಂಬುದೂ ಸಹ ಮುಖ್ಯ. ಕಟ್ಟಡ ಪಾರ್ಕಿಂಗ್, ವಸತಿ, ವಾಣಿಜ್ಯ ಹೀಗೆ ಯಾವುದಕ್ಕೆ ಬಳಕೆಯಾಗುತ್ತಿದ್ದರೆ ಅದರ ಆಧಾರದ ಮೇಲೆ ತೆರಿಗೆ ನಿಗದಿಯಾಗುತ್ತದೆ. ಅಲ್ಲದೆ ಡ್ರೋನ್ ಮೂಲಕ ಸಮೀಕ್ಷೆ ನಡೆಸಿದರೆ ಒಂದೆರಡು ಕಟ್ಟಡಗಳ ಚಿತ್ರೀಕರಣಕ್ಕೆ ಡ್ರೋಣ್ ಕ್ಯಾಮರಾದ ಬ್ಯಾಟರಿ ಖಾಲಿಯಾಗುತ್ತದೆ. ಜತೆಗೆ ದುಬಾರಿ ವೆಚ್ಚವೂ ಆಗಲಿದೆ. ಹೀಗಾಗಿ ಲಕ್ಷಾಂತರ ಕಟ್ಟಡಗಳಿಗೆ ಡ್ರೋನ್ ಮೂಲಕ ಸಮೀಕ್ಷೆ ನಡೆಸುವುದು ಅಸಾಧ್ಯ. ಇದರ ಬದಲಿಗೆ ‘ಟೋಟಲ್ ಸ್ಟೇಷನ್ ಸರ್ವೆ' ನಡೆಸಿದರೆ ಮಾತ್ರ ಪ್ರಯೋಜನ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
