ಬೆಂಗಳೂರು (ಆ. 09): ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದ ಐದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಪರಿಹಾರಕ್ಕಾಗಿ ಬಿಬಿಎಂಪಿ ಸದಸ್ಯರ ಮಾಸಿಕ ಗೌರವ ಧನ .16.8 ಲಕ್ಷವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಲಾಗಿದೆ.

ಧಾರಾಕಾರ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದ ನದಿಗಳು ತುಂಬಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಪರಿಣಾಮ ಲಕ್ಷಾಂತರ ಜನರು ನೆಲೆ ಕಳೆದುಕೊಂಡಿದ್ದಾರೆ. ಜತೆಗೆ, ನೂರಾರು ಹಳ್ಳಿಗಳನ್ನು ಮರುನಿರ್ಮಾಣ ಮಾಡಬೇಕಿದೆ. ನೆರೆಯಲ್ಲಿ ಸಿಲುಕಿರುವ ಜನರಿಗೆ ನೆರವು ನೀಡಲು ಬಿಬಿಎಂಪಿ ಸದಸ್ಯರು ತಮ್ಮ ಒಂದು ತಿಂಗಳ ಗೌರವಧನವನ್ನು ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿದಾಗ ಕೂಡ ಬಿಬಿಎಂಪಿ ಸದಸ್ಯರು ಒಂದು ತಿಂಗಳ ಗೌರವ ಧನ ನೀಡಿದ್ದರು.

.16.8 ಲಕ್ಷ:

ಸದ್ಯ ಮೇಯರ್‌ .20 ಸಾವಿರ, ಉಪಮೇಯರ್‌ .15 ಸಾವಿರ, ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಪಕ್ಷಗಳ ನಾಯಕರು .7,500 ಮತ್ತು ಉಳಿದ 181 ಸದಸ್ಯರಿಗೆ ತಲಾ .8,500 ಮಾಸಿಕ ಗೌರವಧನ ನೀಡಲಾಗುತ್ತಿದೆ. ಅದರಂತೆ ಒಂದು ತಿಂಗಳಿಗೆ ಎಲ್ಲ ಸದಸ್ಯರ ಗೌರವಧನ .16.80 ಲಕ್ಷ ಗಳಾಗಲಿದೆ. ಈ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡಲಾಗುತ್ತದೆ ಎಂದು ಮೇಯರ್‌ ಗಂಗಾಂಬಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.