Asianet Suvarna News Asianet Suvarna News

ಗದ್ದುಗೆಗಾಗಿ ಕೈ - ಬಿಜೆಪಿ ಕಸರತ್ತು : ಪಕ್ಷೇತರರಿಂದ ಬ್ಲಾಕ್ ಮೇಲ್ ತಂತ್ರ

ನಿರ್ಣಾಯಕ ಪಾತ್ರ ವಹಿಸುವ ಪಕ್ಷೇತರ ಸದಸ್ಯರ ಬೆಂಬಲ ಪಡೆಯಲು ಆಡಳಿತಾರೂಢ ಕಾಂಗ್ರೆಸ್  ಮತ್ತು ಪ್ರತಿಪಕ್ಷ ಬಿಜೆಪಿ ಎರಡೂ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಒಂದೆಡೆ ಅತಿದೊಡ್ಡ ಸಂಖ್ಯಾಬಲ ಹೊಂದಿದ್ದರೂ ಕಳೆದ ಮೂರು ವರ್ಷದಿಂದ ಅಧಿಕಾರ ವಂಚಿತವಾಗಿರುವ ಬಿಜೆಪಿ ಈ ಬಾರಿಯಾದರೂ ಪಾಲಿಕೆ ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನ ನಡೆಸುತ್ತಿದೆ

BBMP Election Fight Between Congress And BJP
Author
Bengaluru, First Published Sep 16, 2018, 7:47 AM IST

ಬೆಂಗಳೂರು :  ಈ ಬಾರಿಯ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪಕ್ಷೇತರ ಸದಸ್ಯರ ಬೆಂಬಲ ಪಡೆಯಲು ಆಡಳಿತಾರೂಢ ಕಾಂಗ್ರೆಸ್  ಮತ್ತು ಪ್ರತಿಪಕ್ಷ ಬಿಜೆಪಿ ಎರಡೂ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಒಂದೆಡೆ ಅತಿದೊಡ್ಡ ಸಂಖ್ಯಾಬಲ ಹೊಂದಿದ್ದರೂ ಕಳೆದ ಮೂರು ವರ್ಷದಿಂದ ಅಧಿಕಾರ ವಂಚಿತವಾಗಿರುವ ಬಿಜೆಪಿ ಈ ಬಾರಿಯಾದರೂ ಪಾಲಿಕೆ ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನ ನಡೆಸುತ್ತಿದೆ. ಪಕ್ಷದ ಪ್ರಭಾವಿ ನಾಯಕರೊಬ್ಬರ ಮೂಲಕ ಶುಕ್ರವಾರ ರಾತ್ರಿ ನಗರದಲ್ಲಿ ಕೆಲ ಪಕ್ಷೇತರ ಪಾಲಿಕೆ ಸದಸ್ಯರ ಸಭೆ ನಡೆಸಿ ಬೆಂಬಲ ಕೋರಿದೆ. 

ಆದರೆ, ಬಿಜೆಪಿ ನಾಯಕರು ಇದನ್ನು ಒಪ್ಪಿಕೊಳ್ಳಲು  ಸಿದ್ಧರಿಲ್ಲ. ಇದರ ಬೆನ್ನಲ್ಲೇ ಕೆಲ ದಿನಗಳ ಹಿಂದಷ್ಟೇಪಕ್ಷೇತರ ಸದಸ್ಯರ ಸಭೆ ನಡೆಸಿದ್ದ  ಕಾಂಗ್ರೆಸ್‌ನ ಪ್ರಭಾವಿ ನಾಯಕ ರಾಮಲಿಂಗಾರೆಡ್ಡಿ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಪಕ್ಷೇತರ ಸದಸ್ಯರನ್ನು ತಮ್ಮ ಪರವಾಗಿಯೇ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ.

ಐವರು ಮಾತ್ರ ಭಾಗಿ: ಈ ಮಧ್ಯೆ, ಪಾಲಿಕೆಯ ಒಟ್ಟು ಎಂಟು ಪಕ್ಷೇತರ ಸದಸ್ಯರ ಪೈಕಿ ಏಳು ಜನರು ಕಾಂಗ್ರೆಸ್ ನಾಯಕರ ಕಳೆದ ಭಾರಿಯ ಸಭೆಗೆ ಹಾಜರಾಗಿದ್ದರು. ಆದರೆ, ಈ ಬಾರಿ ಐವರು ಮಾತ್ರ ಸಭೆಗೆ ಹಾಜರಾಗಿದ್ದು, ಇಬ್ಬರ ಸಂಖ್ಯೆ ಕಡಿಮೆಯಾಗಿರುವುದು ಚರ್ಚೆ ಹುಟ್ಟುಹಾಕಿದೆ. ಶನಿವಾರದ ಸಭೆಗೆ ಪಕ್ಷೇತರ ಕಾರ್ಪೊರೇಟರ್ ಗಳಾದ ಸಗಾಯರಾಯಪುರ ವಾರ್ಡ್‌ನ ಏಳುಮಲೈ, ಹೊಯ್ಸಳನಗರ ವಾರ್ಡ್‌ನ  ನಂದ್‌ಕುಮಾರ್, ಮಾರತ್ತಹಳ್ಳಿ ವಾರ್ಡ್‌ನ ಎಂ.ರಮೇಶ್, ದೊಮ್ಮ ಲೂರು ವಾರ್ಡ್‌ನ ಸಿ.ಆರ್.ಲಕ್ಷ್ಮೀನಾರಾಯಣ, ಕೋಣೇನ ಅಗ್ರಹಾರ ವಾರ್ಡ್‌ನ  ರುದ್ರಪ್ಪರೆಡ್ಡಿ
ಹಾಜರಾಗಿದ್ದರು. 

ಈ ಐವರು ಪಕ್ಷೇತರ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್ ನಾಯಕರು  ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಮುಂದುವರೆಯಲು ಈ ಬಾರಿಯೂ ಮೇಯರ್ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೋರಿದ್ದು, ಸೂಕ್ತ ಸ್ಥಾಯಿ ಸಮಿತಿ ಅಧಿಕಾರದ ಭರವಸೆಯನ್ನೂ ನೀಡಲಾಗಿದೆ. ಇದಕ್ಕೆ ಐವರೂ ಪಕ್ಷೇತರ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ವಿಫಲ: ಶುಕ್ರವಾರ ರಾತ್ರಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಮ್ಮ ನಿವಾಸದಲ್ಲಿ ಕೆಲ ಪಕ್ಷೇತರ ಶಾಸಕರೊಂದಿಗೆ ಸಭೆ ನಡೆಸಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಕೋರಿದ್ದಾರೆ. ಆದರೆ, ಸಭೆಯಲ್ಲಿ ಪಕ್ಷೇತರರು ತಮಗೆ ಉಪಮೇಯರ್ ಸ್ಥಾನದ ಜತೆಗೆ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯಂತಹ ಪ್ರಮುಖ ಸಮಿತಿಗಳ ಅಧಿಕಾರ ಕೋರಿದರು. ಇದಕ್ಕೆ ಬಿಜೆಪಿ ನಾಯಕರು ಚುನಾವಣೆಯಲ್ಲಿ ಗೆಲ್ಲಲ್ಲು ಮೊದಲು ಸಹಕರಿಸಿ ಆ ನಂತರ ತಮ್ಮ ಬೇಡಿಕೆಯಂತೆ ಅಧಿಕಾರ ನೀಡುವ ಬಗ್ಗೆ ಚರ್ಚಿಸೋಣ ಎಂದು ಭರವಸೆ ನೀಡಿದರು. ಆದರೆ, ಅಧಿಕಾರದ ಬಗ್ಗೆ ಖಚಿತ ಭರವಸೆ ನೀಡದ ಹಿನ್ನೆಲೆಯಲ್ಲಿ ಪಕ್ಷೇತರನ್ನು ಮನವೊಲಿಸುವಲ್ಲಿ ಬಿಜೆಪಿ ವಿಫಲವಾಯಿತು ಎಂದು ಹೇಳಲಾಗುತ್ತಿದೆ.

ಪಕ್ಷೇತರರಿಂದ ಬ್ಲಾಕ್ ಮೇಲ್ ತಂತ್ರ: ಆದರೆ, ಬಿಜೆಪಿ ಈ ಸಭೆ ನಡೆದಿರುವುದನ್ನು ನಿರಾಕರಿಸುತ್ತಿದೆ. ನಾವು ಯಾವುದೇ ಪಕ್ಷೇತರ ಸದಸ್ಯರ ಸಭೆ ನಡೆಸಿಲ್ಲ. ಕೆಲ ಪಕ್ಷೇತರ ಸದಸ್ಯರೇ ನಮ್ಮ ಬಳಿ ಬಂದಿದ್ದರು. ಆಗ ಈ ಬಾರಿಯ ಮೇಯರ್ ಚುನಾವಣೆಗೆ ಬಿಜೆಪಿ ಸ್ಪರ್ಧಿಸಲಿದೆ, ನಮ್ಮ ಪರ ಗೆಲುವಿಗೆ ಸಹಕರಿಸಿ ಎಂದು ಮನವಿ ಮಾಡಲಾಯಿತು ಅಷ್ಟೆ. ಆದರೆ, ಪಕ್ಷೇತರರು ಇದನ್ನೇ ಮುಂದಿಟ್ಟುಕೊಂಡು ಬಿಜೆಪಿಯವರು ನಮ್ಮನ್ನು ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಪ್ರತೀ ಬಾರಿಯಂತೆ ಬಿಜೆಪಿ ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಲಿದೆ. ಅತಿ ಹೆಚ್ಚು ಸಂಖ್ಯಾಬಲ ಇದ್ದರೂ, ವಾಮ ಮಾರ್ಗದಿಂದ ಅಧಿಕಾರ ಹಿಡಿಯುವ ಯತ್ನ ಮಾಡುವುದಿಲ್ಲ ಎಂದು ಪಾಲಿಕೆ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಹೇಳಿದ್ದಾರೆ. 

Follow Us:
Download App:
  • android
  • ios