ನಾನು ಎರಡು ಅವಧಿಯಾದ ಮೇಲೆ ಕ್ಷೇತ್ರ ಬಿಟ್ಟುಕೊಡುವುದಾಗಿ ಮಾತುಕೊಟ್ಟಿದ್ದೇನೆ ಎಂದು ಹಾಲಿ ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ರಾಜಶೇಖರ ಸಿಂಧೂರ ಆರೋಪಿಸಿದ್ದಾರೆ. ಇದು ಸುಳ್ಳು, ನಾನು ಯಾರಿಗೂ ಮಾತು ಕೊಟ್ಟಿಲ್ಲ ಎಂದು ಶಾಸಕ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಶಿಗ್ಗಾಂವಿ : ನಾನು ಎರಡು ಅವಧಿಯಾದ ಮೇಲೆ ಕ್ಷೇತ್ರ ಬಿಟ್ಟುಕೊಡುವುದಾಗಿ ಮಾತುಕೊಟ್ಟಿದ್ದೇನೆ ಎಂದು ಹಾಲಿ ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ರಾಜಶೇಖರ ಸಿಂಧೂರ ಆರೋಪಿಸಿದ್ದಾರೆ. ಇದು ಸುಳ್ಳು, ನಾನು ಯಾರಿಗೂ ಮಾತು ಕೊಟ್ಟಿಲ್ಲ ಎಂದು ಶಾಸಕ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳಿದ್ದು ಪಕ್ಷದ ವರಿಷ್ಠರಾದ ಬಿ.ಎಸ್‌.ಯಡಿಯೂರಪ್ಪ, ಅನಂತಕುಮಾರ್‌ ಅವರು. ಯಡಿಯೂರಪ್ಪನವರು ಬೆಂಗಳೂರಿನಲ್ಲಿ ಅಂದು ನಡೆದ ಸಭೆಯಲ್ಲಿ ಬಸವರಾಜ ಬೊಮ್ಮಾಯಿಗೆ ಪಕ್ಷದ ಟಿಕೆಟ್‌ ನೀಡಬೇಕಾಗುತ್ತದೆ ಎಂದು ಹೇಳಿದ್ದರು. ಆಗ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಬೇವಿನಮರದ ಶಿಗ್ಗಾಂವಿಗೆ ಬಂದು ಹ್ಯಾಂಡ್‌ ಬಿಲ್‌ ಮಾಡಿಸಿ, ತಾಲೂಕಿನಾದ್ಯಾಂತ ಓಡಾಡಿ ಪೆಂಡಾಲ್‌ ಹಾಕಿ, ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದಿದ್ದರು. 2008ರಲ್ಲಿ ಈ ಕುರಿತು ಅವರು ಕರೆದಿದ್ದ ಸಭೆ ಯಶಸ್ವಿಯಾಗದ ಕಾರಣ ಆಮೇಲೆ ಬಂದು ಪಕ್ಷದ ಜತೆಗೆ ನಿಲ್ಲುತ್ತೇನೆ ಎಂದು ಹೇಳಿದ್ದರು. ಹೀಗಾಗಿ, ಆಗ ನಾನು ಮಾತು ಕೊಟ್ಟಿದ್ದರೆ ಅವರೇಕೆ ಹಾಗೆ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ಸ್ಥಳೀಯರಿಗೆ ಟಿಕೆಟ್‌ ಕೊಡಬೇಕು ಎನ್ನುತ್ತಾರೆ. ಆದರೆ, ನಾನು ಎಲ್ಲರಿಗಿಂತಲೂ ಹೆಚ್ಚು ಸ್ಥಳೀಕ. ನಮ್ಮ ತಾಯಿ ಹುಟ್ಟಿದ್ದು ದುಂಡಶಿಯಲ್ಲಿ. ನಮ್ಮ ತಂದೆ ಹುಟ್ಟಿರುವುದು ಕಾರಡಿಗಿಯಲ್ಲಿ. ನನ್ನ ಸಂಬಂಧಗಳು ತಾಲೂಕಿನಲ್ಲಿ ಆಳವಾಗಿವೆ. ನಮ್ಮ ಅಜ್ಜ 1952ರಲ್ಲೇ ಈ ತಾಲೂಕಿನ ಶಾಸಕರಾಗಿದ್ದರು ಎಂದು ಬೊಮ್ಮಾಯಿ ಹೇಳಿದ್ದಾರೆ.