ನವದೆಹಲಿ (ಡಿ. 26): ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಬರೋಡಾದಲ್ಲಿ, ವಿಜಯಾ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆ ವಿರೋಧಿಸಿ ಬ್ಯಾಂಕ್‌ ಅಧಿಕಾರಿಗಳ ವಿವಿಧ ಸಂಘಟನೆಗಳು ಬುಧವಾರ ದೇಶವ್ಯಾಪಿ ಮುಷ್ಕರಕ್ಕೆ ಕರೆಕೊಟ್ಟಿವೆ. ಹೀಗಾಗಿ ಬುಧವಾರ ದೇಶಾದ್ಯಂತ ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಸರ್ಕಾರಿ ಬ್ಯಾಂಕ್‌ಗಳು ಮುಚ್ಚಿದ್ದರೂ, ಖಾಸಗಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಸಣ್ಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ, ಜಾಗತಿಕ ಬ್ಯಾಂಕ್‌ಗಳೊಂದಿಗೆ ಸ್ಪರ್ಧೆ ನಡೆಸುವ ರೀತಿಯ ದೊಡ್ಡ ಬ್ಯಾಂಕ್‌ಗಳ ಸ್ಥಾಪನೆಯ ತನ್ನ ಉದ್ದೇಶದ ಭಾಗವಾಗಿ, ಬ್ಯಾಂಕ್‌ ಆಫ್‌ ಬರೋಡಾದಲ್ಲಿ ವಿಜಯಾ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳನ್ನು ವಿಲೀನಗೊಳಿಸಲು, ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ ಇದಕ್ಕೆ 10 ಲಕ್ಷ ನೌಕರರನ್ನು ಒಳಗೊಂಡ 9 ಬ್ಯಾಂಕ್‌ ನೌಕರರ ಸಂಘಟನೆಗಳ ಒಕ್ಕೂಟವಾದ ಯುಎಫ್‌ಬಿಯು ವಿರೋಧ ವ್ಯಕ್ತಪಡಿಸಿದೆ.

ಮೂರೂ ಬ್ಯಾಂಕ್‌ಗಳ ವಿಲೀನದ ಹೊರತಾಗಿಯೂ, ಹೊಸ ಬ್ಯಾಂಕ್‌ ವಿಶ್ವದ ಅತಿದೊಡ್ಡ 10 ಬ್ಯಾಂಕ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದಿಲ್ಲ. ಜೊತೆಗೆ ಮುಂದಿನ ದಿನಗಳಲ್ಲಿ ಇದು ಉದ್ಯೋಗ ಕಡಿತಕ್ಕೆ ಕಾರಣವಾಗಬಲ್ಲದು ಎಂಬ ಕಾರಣ ನೀಡಿ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ.

ಕಳೆದೊಂದು ವಾರದಲ್ಲಿ ಬ್ಯಾಂಕ್‌ ಸಂಘಟನೆ ಕರೆಕೊಟ್ಟಿರುವ 2ನೇ ಮುಷ್ಕರ ಇದಾಗಿದೆ. ಕಳೆದ ಶುಕ್ರವಾರದಂದು ಬ್ಯಾಂಕ್‌ಗಳ ವಿಲೀನ ಮತ್ತು ತತ್‌ಕ್ಷಣವೇ ತಮ್ಮ ವೇತನ ನೀಡುವಂತೆ ಆಗ್ರಹಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಅಧಿಕಾರಿಗಳ ಸಂಘಟನೆ ಪ್ರತಿಭಟನೆ ಕೈಗೊಂಡಿತ್ತು.

ಕಳೆದ ವರ್ಷ ಸ್ಟೇಟ್‌ ಬ್ಯಾಂಕ್‌ ಇಂಡಿಯಾದಲ್ಲಿ 5 ಸಹಯೋಗಿ ಬ್ಯಾಂಕ್‌ಗಳನ್ನು ಕೇಂದ್ರ ಸರ್ಕಾರ ವಿಲೀನಗೊಳಿಸಿತ್ತು.