ನವದೆಹಲಿ(ನ.20): ಯಾರು ತಮ್ಮ ಅಕ್ರಮ ಹಣವನ್ನು ಇನ್ನೊಬ್ಬರ ಖಾತೆಯಲ್ಲಿ ಠೇವಣಿ ಇಡುತ್ತಿದ್ದಾರೋ ಅವರು ದಂಡ ಮಾತ್ರವಲ್ಲ, ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.

ಹಣವನ್ನು ಬೇರೊಬ್ಬರ ಖಾತೆಯಲ್ಲಿಟ್ಟರೆ, ಅಂಥವರ ವಿರುದ್ಧ ಇತ್ತೀಚೆಗಷ್ಟೇ ಜಾರಿಯಾದ ಬೇನಾಮಿ ವಹಿವಾಟು ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದು. ಇಲ್ಲಿ ಹಣದ ಒಡೆಯ ಮಾತ್ರವಲ್ಲ, ಅದನ್ನು ತನ್ನ ಖಾತೆಯಲ್ಲಿ ಇಟ್ಟುಕೊಂಡ ವ್ಯಕ್ತಿಯ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಕಾಯ್ದೆಯ ಅನ್ವಯ, ತಪ್ಪಿತಸ್ಥರಿಗೆ ಆ ಬೇನಾಮಿ ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ.25ರವರೆಗೆ ದಂಡ, 1ರಿಂದ 7 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ನ.8ರ ಬಳಿಕ ಅನುಮಾನಾಸ್ಪದವಾಗಿ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಯತ್ನಿಸಿದವರ ಮನೆ, ಸಂಸ್ಥೆಗಳಿಗೆ ಈಗಾಗಲೇ ದಾಳಿ ನಡೆಸಲಾಗಿದ್ದು, 80 ಸರ್ವೇಗಳು ಮತ್ತು 30 ಕಡೆ ಶೋಧ ಕಾರ್ಯ ನಡೆಸಿ ಸುಮಾರು 200 ಕೋಟಿ ಅಕ್ರಮ ಆದಾಯವನ್ನು ಪತ್ತೆಹಚ್ಚಿದ್ದೇವೆ ಎಂದೂ ಐಟಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.