ವಿಶ್ವ ಭೂಪಟದಲ್ಲಿ ಸ್ಟಾರ್ಟಪ್ ವಲಯದ ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಬೆಂಗಳೂರು ನಗರ, ಭವಿಷ್ಯದ ವಿಶ್ವದ ನಗರಿ ಎಂಬ ಪ್ರಶಂಸೆಗೆ ಪಾತ್ರವಾಯಿತು. ನಗರದಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಮೊದಲ ದಿನದ ಗೋಷ್ಠಿಯೊಂದರಲ್ಲಿ ದೇಶದ ವಿವಿಧೆಡೆಯಿಂದ ಬಂದಿದ್ದ ಉದ್ಯಮದ ವಲಯದ ದಿಗ್ಗಜರು ಬೆಂಗಳೂರೇ ದೇಶದ ಭವಿಷ್ಯ ಎಂದು ಬಣ್ಣಿಸಿದರು.

ಬೆಂಗಳೂರು (ಜ.07): ವಿಶ್ವ ಭೂಪಟದಲ್ಲಿ ಸ್ಟಾರ್ಟಪ್ ವಲಯದ ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಬೆಂಗಳೂರು ನಗರ, ಭವಿಷ್ಯದ ವಿಶ್ವದ ನಗರಿ ಎಂಬ ಪ್ರಶಂಸೆಗೆ ಪಾತ್ರವಾಯಿತು. ನಗರದಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಮೊದಲ ದಿನದ ಗೋಷ್ಠಿಯೊಂದರಲ್ಲಿ ದೇಶದ ವಿವಿಧೆಡೆಯಿಂದ ಬಂದಿದ್ದ ಉದ್ಯಮದ ವಲಯದ ದಿಗ್ಗಜರು ಬೆಂಗಳೂರೇ ದೇಶದ ಭವಿಷ್ಯ ಎಂದು ಬಣ್ಣಿಸಿದರು.

ಐ ಸ್ಪಿರಿಟ್ ಸಹ ಸಂಸ್ಥಾಪಕ ಶರದ್ ಶರ್ಮಾ ಬೆಂಗಳೂರು ನಗರದ ಪ್ರಶಂಸೆಗೆ ನಾಂದಿ ಹಾಡಿದವರು. ಅಸಾಂಪ್ರದಾಯಿಕ ಸಂಶೋಧನೆಗಳು- ಕರ್ನಾಟಕದಲ್ಲಿ ಸ್ಟಾರ್ಟಪ್‌ಗೆ ಪೂರಕ ವಾತಾವರಣ ಕುರಿತು ಗೋಷ್ಠಿಯಲ್ಲಿ ತಜ್ಞರಾಗಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಆರು ತಿಂಗಳಲ್ಲಿ ದೇಶದಲ್ಲಿ 100 ಮಿಲಿಯನ್ ಜನರು ಡೆಬಿಟ್ ಅಥವಾ ಇನ್ನಾವುದೇ ಡಿಜಿಟಲ್ ಮಾಧ್ಯಮಗಳ ಮೂಲಕ ಆರ್ಥಿಕ ವಹಿವಾಟು ನಡೆಸಿದ್ದಾರೆ. ಮುಂದಿನ ಡಿಸೆಂಬರ್ ವೇಳೆಗೆ ವಿಶ್ವದ ಅತಿಹೆಚ್ಚು ಇ-ಸೈನ್ ಬಳಸಿ ಆರ್ಥಿಕ ವ್ಯವಹಾರ ನಡೆಸುವ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದರಲ್ಲದೇ ಇಂತಹ ಹೊಸ ಮಾದರಿಯ ತಂತ್ರಜ್ಞಾನ ಸಂಶೋಧನೆ ಮತ್ತು ಉತ್ಪಾದನೆಗೆ ಬೆಂಗಳೂರು ನಗರ ಪ್ರಶಸ್ತ ತಾಣವಾಗಿದೆ ಎಂದು ಹೇಳಿದರು.

೩೦ ವರ್ಷಗಳಲ್ಲಿ ತಂತ್ರಜ್ಞಾನದ ಬೆಳವಣಿಗೆ ಗಮನಿಸಿದರೆ ಮಾಹಿತಿ ತಂತ್ರಜ್ಞಾನ ಆಧರಿತ ವಲಯವೇ ಅತಿ ಹೆಚ್ಚು ಬಳಕೆದಾರನ ಸ್ನೇಹಿಯಾಗಿ ಬೆಳವಣಿಗೆ ಹೊಂದಿದೆ. ಮೂಲಸೌಕರ್ಯ ಕ್ಷೇತ್ರಕ್ಕಿಂತ ಐಟಿ ಕ್ಷೇತ್ರ ತ್ವರಿತಗತಿಯಲ್ಲಿ ಬೆಳವಣಿಗೆ ಹೊಂದಿದ್ದು, ಭಾರತದ ಅದರಲ್ಲೂ ಬೆಂಗಳೂರು ನಗರದ ಸಹಭಾಗಿತ್ವ ಇದರಲ್ಲಿ ಗಮನಾರ್ಹವಾಗಿದೆ. ಅಮೆರಿಕ ಸರಕು ಸಾಗಾಟ ಕ್ಷೇತ್ರದಲ್ಲಿ ಹೊಂದಿದ್ದ ಪ್ರಾಬಲ್ಯವನ್ನು ಮುರಿಯುವ ನಿಟ್ಟಿನಲ್ಲಿ ಭಾರತದ ಸರಕು ಸಾಗಾಟ ವಲಯ ಮಾಹಿತಿ ತಂತ್ರಜ್ಞಾನ ಅಳವಡಿಸಿಕೊಂಡು ಮುನ್ನುಗ್ಗುತ್ತಿದೆ. ಭವಿಷ್ಯದಲ್ಲಿ ಭಾರತವೇ ಇದರಲ್ಲಿ ಪಾರಮ್ಯ ಸಾಧಿಸಲಿದೆ ಎಂದು ಭವಿಷ್ಯ ನುಡಿದರು.

ಕ್ವಿಕ್‌ಪಾಡ್ ಸಹ ಸಂಸ್ಥಾಪಕ ರವಿ ಗುರುರಾಜ್ ಮಾತನಾಡಿ, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಉದ್ಯಮದಲ್ಲಿ ಗ್ರಾಹಕರಿಗೆ ಅತ್ಯಂತ ತೃಪ್ತಿಕರ ಸೇವೆ ನೀಡುವ ತಂತ್ರಜ್ಞಾನ ಮತ್ತು ಉತ್ಪಾದನೆಗಳಿಗೆ ಇಂದು ಭಾರತ ವಿಶ್ವದ ಗಮನ ಸೆಳೆದಿದೆ. ವಿಶೇಷವಾಗಿ ಬೆಂಗಳೂರು ನಗರ ಸಾಫ್ಟ್‌ವೇರ್ ಮತ್ತು ವಿನ್ಯಾಸ ಸಂಬಂಧಿ ಕ್ಷೇತ್ರದಲ್ಲಿ ಅತ್ಯಂತ ಪೂರಕ ವಾತಾವರಣ ಹೊಂದಿದೆ ಎಂದು ಬಣ್ಣಿಸಿದರೆ, ಸೀ-೬ ಕಂಪನಿಯ ಸಹ ಸಂಸ್ಥಾಪಕ ಶ್ರೀಕುಮಾರ್ ಸೂರ್ಯನಾರಾಯಣ ಮಾತನಾಡಿ, ಜೈವಿಕ ತಂತ್ರಜ್ಞಾನದ ಬೆಳವಣಿಗೆಗೆ ದೇಶದಲ್ಲಿ ಪೂರಕ ವಾತಾವರಣ ಇರುವ ಪ್ರಮುಖ ನಾಲ್ಕು ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ೧೩೦ಕ್ಕೂ ಹೆಚ್ಚು ಬಿಟಿ ಕಂಪನಿಗಳು ಇಂದು ಬೆಂಗಳೂರಿನಲ್ಲಿ ನೆಲೆಸಿರುವುದು ಅದಕ್ಕೆ ಸಾಕ್ಷಿ ಎಂದು ಬಣ್ಣಿಸಿದರು.

ಇಂಡಸ್ ಟೀಮ್ ಫ್ಲೀಟ್ ಕಮಾಂಡರ್ ರಾಹುಲ್ ನಾರಾಯಣ, ಚಂದ್ರನಲ್ಲಿ ಪದಾರ್ಪಣೆ ಮಾಡಲಿರುವ ದೇಶದ ಮೊದಲ ಖಾಸಗಿ ವಲಯದ ರೋಬೊ ಪ್ರಯೋಗದ ಕನಸು ೨೦೧೭ರ ಡಿ.೨೮ಕ್ಕೆ ನನಸಾಗಲಿದೆ ಎಂದು ತಿಳಿಸಿದರು.

ಆಂಧ್ರ ಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ಪಲ್ಲಿ ರಘುರಾಮ್ ರೆಡ್ಡಿ, ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಸಿಇಓ ನವೀನ್ ಝಾ ಹಾಗೂ ಇನ್ ಮೊಬಿ ಸಹ ಸಂಸ್ಥಾಪಕ ನವೀನ್ ತಿವಾರಿ ತಮ್ಮ ಅನುಭವ ಹಂಚಿಕೊಂಡರು. 

ನಾವೇ ಮಾದರಿ: ಪ್ರಿಯಾಂಕ ಖರ್ಗೆ

ದೇಶದಲ್ಲಿಯೇ ಮೊದಲ ಬಾರಿಗೆ ಬಹು ವಲಯ ಸ್ಟಾರ್ಟಪ್ ನೀತಿ ಜಾರಿಗೊಳಿಸಿದ ಕರ್ನಾಟಕ, ೨೦೨೦ರ ವೇಳೆಗೆ ೨೦ ಸಾವಿರ ಸ್ಟಾರ್ಟಪ್‌ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಈಗಾಗಲೇ ರಾಜ್ಯದಲ್ಲಿ ೬ ಸಾವಿರ ಸ್ಟಾರ್ಟ್‌ಅಪ್‌ಗಳು ತಮ್ಮ ಉತ್ಪನ್ನಗಳನ್ನು ನಿರ್ಧರಿಸಿವೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು. 

ದೇಶದಲ್ಲಿ ಆಗುವ ಒಟ್ಟು ಹೂಡಿಕೆಯ ಶೇ.೨೫ರಷ್ಟು ಹಣ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತದೆ. ಜಗತ್ತಿನ ಮೂರನೇ ಒಂದು ಭಾಗದಷ್ಟು ಐಟಿ ಉತ್ಪಾದನೆ ಬೆಂಗಳೂರಿನಲ್ಲಿ ಆಗುತ್ತಿದೆ. ರಾಜ್ಯ ಸರ್ಕಾರ ಸ್ಟಾರ್ಟಪ್ ನೀತಿ ಘೋಷಿಸಿದ ೧೦ ದಿನಗಳಲ್ಲೇ ೧೨೭ ಹೊಸ ಆಲೋಚನೆಗಳುಳ್ಳ ನವೀನ ಸ್ಟಾರ್ಟಪ್‌ಗಳು ನೋಂದಾಯಿಸಲ್ಪಟ್ಟವು. ಇದು ಭವಿಷ್ಯದ ಕುರುಹು ಆಗಿದೆ ಎಂದೇ ಸರ್ಕಾರ ಭಾವಿಸಿದೆ. ಹೀಗಾಗಿ ಸ್ಟಾರ್ಟಪ್ ಕ್ಷೇತ್ರದಲ್ಲಿ ಹೂಡಿಕೆದಾರರನ್ನು ಉತ್ತೇಜಿಸುವುದಲ್ಲದೇ ಸ್ವತಃ ಹೂಡಿಕೆ ಮಾಡುವ ಯೋಜನೆ ಕೂಡ ಪ್ರಕಟಿಸಿದೆ. ಈಗಾಗಲೇ ದೇಶದ ಮೊದಲ ಬಾಹ್ಯಾಕಾಶ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಿದೆ. ಕೃಷಿಯಿಂದ ಬಾಹ್ಯಾಕಾಶದಿಂದವರೆಗೂ ಕರ್ನಾಟಕ ರಾಜ್ಯದ ನವೀನ ತಂತ್ರಜ್ಞಾನಗಳ ಉದ್ಯಮಗಳನ್ನು ಜಗತ್ತಿನ ಮುಂದೆ ಪ್ರದರ್ಶಿಸಬೇಕು ಎಂಬ ಗುರಿ ನಮ್ಮದಾಗಿದೆ. ಈ ಕಾರ್ಯ ಕೇವಲ ಬೆಂಗಳೂರಿಗೆ ಸೀಮಿತಗೊಳ್ಳದೇ ಎರಡನೇ ಹಂತದ ನಗರಗಳಿಗೂ ವಿಸ್ತಾರಗೊಳ್ಳುತ್ತಿರುವುದು ನಮ್ಮ ಉತ್ಸಾಹ ಹೆಚ್ಚಿಸಿದೆ ಎಂದು ತಿಳಿಸಿದರು.