ಢಾಕಾ[ಮಾ.28]: ಬಾಂಗ್ಲಾದೇಶದಲ್ಲಿ 20 ವರ್ಷದ ಮಹಿಳೆಯೊಬ್ಬಳು ಮೊದಲ ಹೆರಿಗೆಯಾದ ಕೇವಲ 26 ದಿನಗಳಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈ ಕೌತುಕ ವೈದ್ಯರನ್ನೇ ಅಚ್ಚರಿಗೀಡು ಮಾಡಿದೆ. 

ಬಾಂಗ್ಲಾದ ಜೆಸ್ಸೂರ್​ ಜಿಲ್ಲೆಯ 20 ವರ್ಷದ ಆರಿಫಾ ಸುಲ್ತಾನಾ ಎಂಬಾಕೆಯೇ ಮೂವರು ಮಕ್ಕಳಿಗೆ ಜನ್ಮ ನೀಡಿದ ತಾಯಿ. ಈಕೆಗೆ ಮೊದಲ ಹೆರಿಗೆ ನಾರ್ಮಲ್ ಆಗಿತ್ತು ಹೀಗಾಗಿ ವೈದ್ಯರಿಗೆ ಅವಳಿ ಮಕ್ಕಳಿರುವ ವಿಚಾರ ತಿಳಿದಿರಲಿಲ್ಲ. ಅದೇನಿದ್ದರೂ ಸ್ಕ್ಯಾನಿಂಗ್ ನಲ್ಲೂ ಹೊಟ್ಟೆಯಲ್ಲಿ ಮಕ್ಕಳಿರುವ ವಿಚಾರ ವೈದ್ಯರ ಗಮನಕ್ಕೆ ಬರಲಿಲ್ಲ ಎಂಬುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ. ಅತ್ತ ತಾಯಿ ಆರಿಫಾಗೂ ತನ್ನ ಹೊಟ್ಟೆಯಲ್ಲಿ ಅವಳಿ ಮ್ಕಕಳಿದ್ದಾರೆ ಎಂದು ಅನುಭವಕ್ಕೆ ಬಂದಿರಲಿಲ್ಲ.

ಹೆರಿಗೆಯಾಗಿ 26 ದಿನಗಳಲ್ಲಿ ಆರಿಫಾಗೆ ಮತ್ತೊಮ್ಮೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಆಗಷ್ಟೇ ಆರಿಫಾ ಹೊಟ್ಟೆಯಲ್ಲಿ ಅವಳಿ ಮಕ್ಕಳಿರುವ ವಿಚಾರ ವೈದ್ಯರ ಗಮನಕ್ಕೆ ಬಂದದ್ದು. ಎರಡನೇ ಬಾರಿ ಸಿಸೇರಿಯನ್ ಮೂಲಕ ಅವಳಿ ಮಕ್ಕಳನ್ನು ಹೊರತೆಗೆಯಲಾಗಿದೆ. ಇದೀಗ ಆರೀಫಾ ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.

ನಮ್ಮದು ತುಂಬಾ ಬಡ ಕುಟುಂಬ. ಮೂರು ಮಕ್ಕಳು ಹುಟ್ಟಿದ್ದು ಬಹಳ ಖುಷಿಯಾಗಿದೆ. ಆದರೆ, ಅದರೊಂದಿಗೆ ಮಕ್ಕಳನ್ನು ಹೇಗೆ ಸಾಕುವುದು ಎಂಬ ಚಿಂತೆ ಶುರುವಾಗಿದೆ. ಕೂಲಿ ಕೆಲಸ ಮಾಡುವ ಗಂಡ ತಿಂಗಳಿಗೆ ಕೇವಲ 6 ಸಾವಿರ ರೂ. ದುಡಿಯುತ್ತಾರೆ. ಈ ಮೂರು ಮಕ್ಕಳನ್ನು ಆ ಹಣದಲ್ಲಿ ಸಾಕಲು ಸಾಧ್ಯವಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ಆರಿಫಾ ಸುಲ್ತಾನಾ ತೋಡಿಕೊಂಡಿದ್ದಾರೆ.