Asianet Suvarna News Asianet Suvarna News

ಬೆಂಗಳೂರು : ಮತ್ತೊಬ್ಬ ಶಂಕಿತ ಉಗ್ರ ಅರೆಸ್ಟ್‌

ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಸಿಕ್ಕಿಬಿದ್ದ ಮಾತ್‌ - ಉಲ್‌ - ಮುಜಾಹಿದೀನ್‌-ಬಾಂಗ್ಲಾದೇಶ್‌ (ಜೆಎಂಬಿ) ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ ನೀಡಿದ ಮಾಹಿತಿ ಬೆನ್ನತ್ತಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ತ್ರಿಪುರದ ಅಗರ್ತಲದಲ್ಲಿ ಮತ್ತೊಬ್ಬ ಶಂಕಿತನನ್ನು ಬಂಧಿಸಿದ್ದಾರೆ. 

Bangalore Terror Threat Case Another Terrorist Arrested in Agartala
Author
Bengaluru, First Published Aug 29, 2019, 8:09 AM IST

ಬೆಂಗಳೂರು [ಆ.29]: ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಸಿಕ್ಕಿಬಿದ್ದ ಮಾತ್‌ - ಉಲ್‌ - ಮುಜಾಹಿದೀನ್‌-ಬಾಂಗ್ಲಾದೇಶ್‌ (ಜೆಎಂಬಿ) ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ ನೀಡಿದ ಮಾಹಿತಿ ಬೆನ್ನತ್ತಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ತ್ರಿಪುರದ ಅಗರ್ತಲದಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.

ನಜೀರ್‌ ಶೇಖ್‌ ಅಲಿಯಾಸ್‌ ಪತ್ಲಾ ಅನಾಸ್‌ ಬಂಧಿತ. ಶಂಕಿತ ಉಗ್ರನನ್ನು ಎನ್‌ಐಎ ಅಧಿಕಾರಿಗಳ ತಂಡ ಬೆಂಗಳೂರಿನ ವಿಶೇಷ ಕೋರ್ಟ್‌ಗೆ ಹಾಜರುಪಡಿಸಿ ವಶಕ್ಕೆ ಪಡೆದಿದೆ ಎಂದು ಮೂಲಗಳು ಖಚಿತಪಡಿಸಿವೆ.

ಒಂದು ವರ್ಷದ ಹಿಂದೆ ರಾಮನಗರದಲ್ಲಿ ಸೆರೆಸಿಕ್ಕ ಬಿಹಾರದ ಬೋಧಗಯಾ ಮಂದಿರದ ಸ್ಫೋಟದ ‘ಮಾಸ್ಟರ್‌ಮೈಂಡ್‌’ ಜೈದುಲ್‌ ಇಸ್ಲಾಮ್‌ ಅಲಿಯಾಸ್‌ ಮುನೀರ್‌ ಶೇಖ್‌ ಹಬೀಬುರ್‌ ರೆಹಮಾನ್‌ನನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ನೇಮಿಸಿದ್ದ. ಜೈದುಲ್‌ ಬಂಧನ ಬಳಿಕ ತಲೆಮರೆಸಿಕೊಂಡಿದ್ದ ರೆಹಮಾನ್‌, ಚಿಕ್ಕಬಾಣಾವರದಲ್ಲಿ ಸಮೀವುಲ್ಲಾ ಎಂಬುವವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ. ಈ ಮನೆಯಲ್ಲಿದ್ದ ಐವರು ಸದಸ್ಯರ ಪೈಕಿ ನಜೀರ್‌ ಶೇಖ್‌ ಕೂಡ ಒಬ್ಬ ಇದ್ದ. ಹಬೀಬುರ್‌ ರೆಹಮಾನ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಜೀರ್‌ ಶೇಖ್‌ ಹಾಗೂ ಶಂಕಿತ ಉಗ್ರರಾದ ಸಜ್ಜದ್‌ ಅಲಿ, ಖಾದರ್‌ ಖಾಜಿ, ಅತಾವುರ್‌ ರೆಹಮಾನ್‌ ಅಲಿಯಾಸ್‌ ನಜ್ರುಲ್‌ ಇಸ್ಲಾಂ ಅಲಿಯಾಸ್‌ ಮೋಟಾ ಅನಾಸ್‌, ಆಸೀಫ್‌ ಇಕ್ಬಾಲ್‌ ಅಲಿಯಾಸ್‌ ನದೀಮ್‌, ಬಾಂಗ್ಲಾದೇಶದ ಅರೀಫ್‌ ರಾಮನಗರದಲ್ಲಿ ಬಂಧನಕ್ಕೆ ಒಳಗಾದ ಜೈದುಲ್‌ ಇಸ್ಲಾಂ ಚಿಕ್ಕಬಾಣವಾರದ ಮನೆಯಲ್ಲಿ ನೆಲೆಸಿದ್ದರು ಎನ್ನಲಾಗಿದೆ.

ಮನೆಯಲ್ಲಿ ಬ್ಯಾಗ್‌ಗಳಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಶಂಕಿತರು ಸ್ಫೋಟಕ ಬಳಸಿ ರಾಕೆಟ್‌ ತಯಾರಿಸಿದ್ದರು. ಶಂಕಿತರ ಗ್ಯಾಂಗ್‌ ತಮಿಳುನಾಡಿನ ಕೃಷ್ಣಗಿರಿಬೆಟ್ಟದಲ್ಲಿ ಪ್ರಾಯೋಗಿಕವಾಗಿ ಮೂರು ಬಾರಿ ರಾಕೆಟ್‌ ಉಡಾಯಿಸಿತ್ತು ಎಂಬುದು ಕೊಲ್ಕತ್ತಾ ಎನ್‌ಐಎ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಚಿಕ್ಕಬಾಣವಾರದಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡ ಎನ್‌ಐಎ ತಂಡ ಉಳಿದ ಶಂಕಿತರ ಬಂಧನಕ್ಕೆ ಬಲೆ ಬೀಸಿತ್ತು. ಈ ತಂಡದಲ್ಲಿ ನಜೀರ್‌ ಶೇಖ್‌ ಕೂಡ ಇದ್ದ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಹಬೀಬುರ್‌ ಬಂಧನದ ಬಳಿಕ ಎಲ್ಲ ಶಂಕಿತರು ಒಂದು ಕಡೆಯಿಂದ ಮತ್ತೊಂದು ಕಡೆಗೆ ನೆಲೆ ಬದಲಿಸುತ್ತಿದ್ದರು. ತ್ರಿಪುರಾದ ಅಗರ್ತಲದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಎನ್‌ಐಎ ತಂಡ ಬಂಧಿಸಿ, ನಗರಕ್ಕೆ ಕರೆ ತಂದಿದೆ.

Follow Us:
Download App:
  • android
  • ios