* ರೌಡಿ ಶೀಟರ್'ಗಳ ಆರ್ಥಿಕ ಮೂಲ, ಪ್ರಸ್ತುತ ಜೀವನ ಶೈಲಿ ಸೇರಿ ಸಮಗ್ರ ಮಾಹಿತಿ ಕಲೆಹಾಕಲು ಪೊಲೀಸರ ತೀರ್ಮಾನ* ನಗರದಲ್ಲಿ ಭೂ ವ್ಯವಹಾರ ಹಾಗೂ ಕಸ ವಿಲೇವಾರಿಯ ಅಕ್ರಮದಲ್ಲಿ ಕೆಲವು ರೌಡಿಶೀಟರ್'ಗಳು ಭಾಗಿ ಆಗಿರುವುದು ಪತ್ತೆ* ಈ ಮಾಫಿಯಾ ವಿರುದ್ಧ ಹೋರಾಟಕ್ಕೆ ಸಾರ್ವಜನಿಕರ ಸಹಕಾರ ಕೋರಿರುವ ಪೊಲೀಸರು
ಬೆಂಗಳೂರು(ಫೆ. 09): ನಗರ ಹಾಗೂ ಹೊರವಲಯದಲ್ಲಿ 8,930 ರೌಡಿಶೀಟರ್'ಗಳಿದ್ದು, ಈ ಪೈಕಿ ಸುಮಾರು 2,700 ಜನರು ರಿಯಲ್ ಎಸ್ಟೇಟ್ ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಈಗ ರೌಡಿಶೀಟರ್'ಗಳ ಆದಾಯದ ಮೂಲದ ಪತ್ತೆ ಹಚ್ಚಲಾಗುತ್ತಿದ್ದು, ಅವರ ಅಸಲಿ ಮುಖವಾಡ ಕಳಚಿಬೀಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರ ಗುಡುಗು:
ಇತ್ತೀಚೆಗೆ ರಾಜಧಾನಿಯನ್ನೇ ಬೆಚ್ಚಿಬೀಳಿಸಿದ ಹಾಡಹಗಲೇ ನಡುರಸ್ತೆಯಲ್ಲಿ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲಿನ ಶೂಟೌಟ್ ಪ್ರಕರಣದ ಬಳಿಕ ಎಚ್ಚೆತ್ತಿರುವ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಈಗ ರೌಡಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಪಾತಕಿಗಳ ವಿರುದ್ಧ ಕಠಿಣ ಜಾರಿಗೊಳಿಸಲು ಆದೇಶಿಸಿದ್ದಾರೆ.
ಈ ಸೂಚನೆ ಹಿನ್ನೆಲೆಯಲ್ಲಿ ಆರ್ಥಿಕ ಮೂಲಗಳು ಹಾಗೂ ಪ್ರಸುತ್ತ ಜೀವ ಶೈಲಿನ ಸೇರಿದಂತೆ ರೌಡಿಶೀಟರ್'ಗಳ ಸಮಗ್ರ ಮಾಹಿತಿ ಕಲೆ ಹಾಕಲು ಸ್ಥಳೀಯ ಪೊಲೀಸರು ಮುಂದಾಗಿದ್ದು, ಈ ವರದಿ ಬಳಿಕ ರೌಡಿಶೀಟರ್‌ಗಳ ಮೇಲೆ ಗೂಂಡಾ ಕಾಯ್ದೆ ಪ್ರಯೋಗಿಸಿ ಬಂಧನಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ'ಕ್ಕೆ ಹೇಳಿವೆ.
ಈ ನಡುವೆ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವವರ ವಿರುದ್ಧ ನಿರ್ದಾಕ್ಷ್ಯಿಣವಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರದಲ್ಲಿ ಭೂ ವ್ಯವಹಾರ ಹಾಗೂ ಕಸ ವಿಲೇವಾರಿಯಲ್ಲಿ ಕೆಲವು ರೌಡಿಶೀಟರ್'ಗಳು ಅಕ್ರಮದಲ್ಲಿ ತೊಡಗಿದ್ದು, ಈಚಿನ ದಿನಗಳಲ್ಲಿ ಕಸ ಮಾಫಿಯಾ ವಿಸ್ತಾರವಾಗಿ ಬೆಳೆಯುತ್ತಿರುವ ಕುರಿತು ಆತಂಕಕಾರಿ ಮಾಹಿತಿ ಬಂದಿದೆ. ಈ ಸಂಬಂಧ ಹೆಚ್ಚಿನ ವಿವರ ಸಂಗ್ರಹಿಸಲಾಗುತ್ತಿದ್ದು, ನಗರದಲ್ಲಿ ಭೂಮಿ ಮತ್ತು ಕಸ ಸೇರಿದಂತೆ ಯಾವುದೇ ರೀತಿಯ ಮಾಫಿಯಾಗಳು ತಲೆ ಎತ್ತಲು ಬಿಡುವುದಿಲ್ಲ ಎಂದು ಹೆಚ್ಚುವರಿ ಆಯುಕ್ತರು ಗುಡುಗಿದರು.
ಈ ಮಾಫಿಯಾಗಳ ಹೋರಾಟಕ್ಕೆ ಸಾರ್ವಜನಿಕರ ಸಹಕಾರ ಕೋರಿರುವ ಹೆಚ್ಚುವರಿ ಆಯುಕ್ತರು, ಸ್ಥಳೀಯವಾಗಿ ಗುಪ್ತವಾಗಿ ನಡೆಯುವ ಕಾನೂನು ಬಾಹಿರ ಕೃತ್ಯಗಳ ಕುರಿತು ಮಾಹಿತಿ ಇದ್ದರೆ ಮುಕ್ತವಾಗಿ ನೀಡುವಂತೆ ಜನರಿಗೆ ಅವರು ವಿನಂತಿಸಿದರು. ಹೀಗೆ ಮಾಹಿತಿ ಕೊಡುವವರ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಉಂಟಾಗದಂತೆ ಸೂಕ್ತ ಭದ್ರತೆ ಕೊಡುವುದಾಗಿಯೂ ಹೇಮಂತ್ ನಿಂಬಾಳ್ಕರ್ ಭರವಸೆ ನೀಡಿದರು.
(ಕನ್ನಡಪ್ರಭ ವಾರ್ತೆ)
