ಗ್ರಾಹಕರು ವಾಪಸ್ ನೀಡುವ ವಸ್ತುಗಳನ್ನು ಪರಿಶೀಲಿಸದೆಯೇ ರೀಫಂಡ್ ಮಾಡುವ ಪದ್ಧತಿ ಅಮೇಜಾನ್'ನಲ್ಲಿ ಮೊದಲಿಂದಲೂ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ, ಈ ಘಟನೆ ನಡೆದ ಬಳಿಕ ಅಮೆರಿಕದ ಇಕಾಮರ್ಸ್ ದೈತ್ಯ ಸಂಸ್ಥೆಯು ತನ್ನ ಪದ್ಧತಿಯನ್ನು ಬದಲಿಸಿಕೊಳ್ಳುತ್ತಿದೆ. ಗ್ರಾಹಕರು ರಿಟರ್ನ್ ಮಾಡುವ ವಸ್ತುಗಳನ್ನು ಪರಿಶೀಲಿಸಿ ಆನಂತರವಷ್ಟೇ ರೀಫಂಡ್ ಮಾಡುವ ಕ್ರಮವನ್ನು ಜಾರಿಗೆ ತರಲಾಗುತ್ತಿದೆ.

ಬೆಂಗಳೂರು(ಮೇ 10): ವಂಚಕರು ಹೇಗೆಲ್ಲಾ ಇರುತ್ತಾರೆ; ಹೇಗೆಲ್ಲಾ ವಂಚಿಸುತ್ತಾರೆ ಎಂಬುದಕ್ಕೆ ನಿದರ್ಶನವಾಗಿ ಒಂದು ಘಟನೆ ಬೆಳಕಿಗೆ ಬಂದಿದೆ. ಅಮೇಜಾನ್ ಸಂಸ್ಥೆಯಿಂದ ವಸ್ತುಗಳನ್ನು ಖರೀದಿಸಿ ಆರ್ಡರ್ ಕ್ಯಾನ್ಸಲ್ ಮಾಡಿ ಡೂಪ್ಲಿಕೇಟ್ ವಸ್ತುಗಳನ್ನು ಮರಳಿಸುತ್ತಿದ್ದ 32 ವರ್ಷದ ಮಹಿಳೆಯನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಅಗರ ನಿವಾಸಿಯಾದ ದೀಪಾನ್ವಿತಾ ಘೋಷ್ ಅವರು ಹೆಚ್ಚೂಕಡಿಮೆ ಒಂದು ವರ್ಷ ಸತತವಾಗಿ ಅಮೇಜಾನ್'ಗೆ ಚಳ್ಳೆಹಣ್ಣು ತಿನಿಸುತ್ತಾ ಬಂದಿದ್ದಳು. ಸುಮಾರು 70 ಲಕ್ಷ ರೂಪಾಯಿಯಷ್ಟು ವಂಚನೆ ಎಸಗಿದ್ದಾಳೆ.

ಏನು ಮಾಡುತ್ತಿದ್ದಳು?
ದೀಪಾನ್ವಿತಾ ಘೋಷ್ ಬೇರೊಂದು ಶಾಪಿಂಗ್ ವೆಬ್'ಸೈಟ್'ನಲ್ಲಿ ಸೆಲ್ಲರ್ ಆಗಿ ಕೆಲಸ ಮಾಡುತ್ತಿರುತ್ತಾಳೆ. ನಕಲಿ ಹೆಸರಿನಿಂದ ಆಪರೇಟ್ ಮಾಡುತ್ತಿದ್ದ ಈಕೆಗೆ ದೇಶಾದ್ಯಂತ ವಿವಿಧ ಗ್ರಾಹಕರಿಂದ ಆರ್ಡರ್'ಗಳು ಸಿಗುತ್ತಿರುತ್ತವೆ. ಬಳಿಕ ಈಕೆ ಅಮೇಜಾನ್'ನಲ್ಲಿ ಆ ವಸ್ತುಗಳಿಗೆ ಆರ್ಡರ್ ಪ್ಲೇಸ್ ಮಾಡುತ್ತಾಳೆ. ತನ್ನ ಗ್ರಾಹಕರ ವಿಳಾಸವನ್ನೇ ಈಕೆ ಅಮೇಜಾನ್'ಗೆ ನೀಡುತ್ತಾಳೆ. ಗ್ರಾಹಕರಿಂದ ತನಗೆ ಹಣ ಸ್ವೀಕರಿಸಿದಾಗ ಮತ್ತು ಅಮೇಜಾನ್'ನಿಂದ ಆ ವಸ್ತುವು ಗ್ರಾಹಕರಿಗೆ ತಲುಪಿದಾಗ, ಈಕೆ ಕೂಡಲೇ ಅಮೇಜಾನ್'ನಲ್ಲಿ ರಿಟರ್ನ್ ರಿಕ್ವೆಸ್ಟ್ ಕಳುಹಿಸುತ್ತಾಳೆ. ಅಂದರೆ, ಆರ್ಡರ್ ಕ್ಯಾನ್ಸಲ್ ಮಾಡುತ್ತಾಳೆ.

ದೀಪಾನ್ವಿತಾ ಕರಾಮತ್ತು ನಡೆಯುವುದು ಈ ಹಂತದಲ್ಲೇ. ರಿಟರ್ನ್ ಮಾಡುವಾಗ ಆ ವಸ್ತುವನ್ನೇ ಹೋಲುವ ಕಳಪೆ ವಸ್ತುವನ್ನು ಪ್ಯಾಕ್ ಮಾಡಿ ಅಮೇಜಾನ್ ಪ್ರತಿನಿಧಿ ಕೈಗೆ ಕೊಟ್ಟು ಕಳುಹಿಸುತ್ತಾಳೆ. ಅಮೇಜಾನ್'ನಿಂದ ಆಕೆಗೆ ರೀಫಂಡ್ ಸಿಗುತ್ತದೆ. ಅಲ್ಲಿಗೆ ಈಕೆಯ ಕಾರ್ಯಾಚರಣೆ ಯಶಸ್ವಿಯಾಗುತ್ತದೆ.

ಆದರೆ, ಯಾವುದೇ ವಂಚನೆಯಾದರೂ ಹೆಚ್ಚು ಕಾಲ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಅಮೇಜಾನ್'ನ ಪ್ರತಿನಿಧಿ ದೇನು ಟಿ.ನಾಯರ್ ಅವರಿಗೆ ಈಕೆಯ ಬಗ್ಗೆ ಅನುಮಾನ ಬರುತ್ತದೆ. ಬಾರಿಬಾರಿ ಈಕೆ ರಿಟರ್ನ್ ರಿಕ್ವೆಸ್ಟ್ ಕಳುಹಿಸುತ್ತಿದ್ದುದು ಅವರಿಗೆ ಅಚ್ಚರಿ ಮೂಡಿಸಿರುತ್ತದೆ. ಈಕೆ ರಿಟರ್ನ್ ಕಳುಹಿಸುವ ವಸ್ತುಗಳು ಕಳಪೆಯಾಗುತ್ತಿರುವುದನ್ನು ಕಂಡು ಈತನ ಅನುಮಾನ ಗಟ್ಟಿಯಾಗುತ್ತದೆ. ಕೂಡಲೇ ಆತ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಆ ಮಹಿಳೆ ವಿರುದ್ಧ ದೂರು ದಾಖಲಿಸುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿ ಪ್ರಕಟವಾಗಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಈಕೆಯ ಬಂಧನವಾಗಿರುವುದು ತಿಳಿದುಬಂದಿದೆ.

ಅಮೇಜಾನ್'ನ ರಿಟರ್ನ್ ಪಾಲಿಸಿಯಲ್ಲಿ ಬದಲಾವಣೆ:
ಗ್ರಾಹಕರು ವಾಪಸ್ ನೀಡುವ ವಸ್ತುಗಳನ್ನು ಪರಿಶೀಲಿಸದೆಯೇ ರೀಫಂಡ್ ಮಾಡುವ ಪದ್ಧತಿ ಅಮೇಜಾನ್'ನಲ್ಲಿ ಮೊದಲಿಂದಲೂ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ, ಈ ಘಟನೆ ನಡೆದ ಬಳಿಕ ಅಮೆರಿಕದ ಇಕಾಮರ್ಸ್ ದೈತ್ಯ ಸಂಸ್ಥೆಯು ತನ್ನ ಪದ್ಧತಿಯನ್ನು ಬದಲಿಸಿಕೊಳ್ಳುತ್ತಿದೆ. ಗ್ರಾಹಕರು ರಿಟರ್ನ್ ಮಾಡುವ ವಸ್ತುಗಳನ್ನು ಪರಿಶೀಲಿಸಿ ಆನಂತರವಷ್ಟೇ ರೀಫಂಡ್ ಮಾಡುವ ಕ್ರಮವನ್ನು ಜಾರಿಗೆ ತರಲಾಗುತ್ತಿದೆ.

ಈ ಹಿಂದೆ ಫ್ಲಿಪ್'ಕಾರ್ಟ್'ನಲ್ಲೂ ಇಂಥದ್ದೇ ರೀತಿಯ ವಂಚನೆ ನಡೆದಿರುವ ಘಟನೆಗಳು ಬೆಳಕಿಗೆ ಬಂದಿದ್ದವು. ಆದರೆ, ಒಬ್ಬರೇ ವ್ಯಕ್ತಿ ಸತತವಾಗಿ ವರ್ಷವಿಡೀ ಏಮಾರಿಸಿದ್ದು ಇದೇ ಮೊದಲಿರಬೇಕು.

(ಮಾಹಿತಿ: ಟೈಮ್ಸ್ ಆಫ್ ಇಂಡಿಯಾ)