ಬೆಂಗಳೂರು[ಅ.03]: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಹವಾನಿಯಂತ್ರಿತ (ವೋಲ್ವೋ) ಬಸ್‌ಗಳಲ್ಲಿ ಪ್ರಯಾಣಿಕರಿಗೆ ನೀಡುತ್ತಿದ್ದ ಪ್ಲಾಸ್ಟಿಕ್‌ ಬಾಟಲಿ ನೀರಿನ ಸೌಲಭ್ಯವನ್ನು ಗುರುವಾರದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ.

ಕೆಎಸ್‌ಆರ್‌ಟಿಸಿಯ 300 ಸೇರಿದಂತೆ ಮೂರು ಸಾರಿಗೆ ನಿಗಮಗಳ 450 ಐಷಾರಾಮಿ ಬಸ್‌ಗಳಲ್ಲಿ ಪ್ರತಿ ವರ್ಷ ಪ್ರಯಾಣಿಕರಿಗೆ 1.20 ಕೋಟಿ ಪ್ಲಾಸ್ಟಿಕ್‌ ಬಾಟಲಿ ನೀರು ವಿತರಿಸಲಾಗುತ್ತಿತ್ತು. ಬಳಿಕ ಈ ಈ ಬಾಟಲಿಗಳು ಭೂಮಿಯ ಒಡಲು ಸೇರುತ್ತಿದ್ದವು. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ ಬಾಟಲಿ ನೀರು ನೀಡದಿರಲು ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ ಈ ಬಸ್‌ಗಳಲ್ಲಿ ಪಯಾಣಿಸುವ ಪ್ರಯಾಣಿಕರು ತಾವೇ ಕುಡಿಯುವ ನೀರಿನ ಬಾಟಲಿ ತರಬೇಕು. ಈ ಸಂಬಂಧ ಟಿಕೆಟ್‌ಗಳಲ್ಲೂ ಮುದ್ರಿಸಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

‘ಸೆಲ್ಫಿ ವಿತ್‌ ಬಾಟಲ್‌’ ಸ್ಪರ್ಧೆ:

ಕೆಎಸ್‌ಆರ್‌ಟಿಸಿಯ ಫೇಸ್‌ಬುಕ್‌ ಹಾಗೂ ಟ್ವಿಟರ್‌ ಖಾತೆಯಲ್ಲಿ ‘ಸೆಲ್ಫಿ ವಿತ್‌ ಮೈ ಓನ್‌ ಬಾಟಲ್‌’ ಹೆಸರಿನಲ್ಲಿ ಸ್ಪರ್ಧೆ ಆಯೋಜಿಸಲು ತೀರ್ಮಾನಿಸಲಾಗಿದೆ. ನಿಗಮದ ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ನೀರಿನ ಬಾಟಲ್‌ ಜತೆ ಸೆಲ್ಫಿ ತೆಗೆದು ಪೋಸ್ಟ್‌ ಮಾಡಬೇಕು. ಮಕ್ಕಳು, ಮಧ್ಯಮ ವಯಸ್ಕರು ಹಾಗೂ ಹಿರಿಯ ನಾಗರಿಕರು ಈ ಮೂರು ವರ್ಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಪ್ರತಿ ವರ್ಗದಲ್ಲಿ ಆಯ್ಕೆಯಾದ ಉತ್ತಮ ಸೆಲ್ಫಿಗೆ ನಿಗಮದ ಬಸ್‌ನ ಒಂದು ಮಾರ್ಗದಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವುದು. ನಿಗಮದ ಬಸ್‌ ನಿಲ್ದಾಣಗಳು, ಡಿಪೋಗಳು ಹಾಗೂ ಬಸ್‌ಗಳಲ್ಲಿ ಸ್ವಚ್ಛತೆ ಕಾಪಾಡುವ ಸಾರಿಗೆ ನಿಗಮದ ಸಿಬ್ಬಂದಿಗೆ ‘ಸಾರಿಗೆ ಸ್ವಚ್ಛತಾ ಪ್ರಶಸ್ತಿ’ ಹಾಗೂ ‘ಸಾರಿಗೆ ಪರಿಸರ ಪ್ರಶಸ್ತಿ’ ವಿತರಿಸಲು ನಿರ್ಧರಿಸಲಾಗಿದೆ. ಪ್ರತಿ ವರ್ಷ ಗಾಂಧಿ ಜಯಂತಿ ದಿನ ಪ್ರಶಸ್ತಿ ವಿತರಿಸಲಾಗುವುದು. ಅಲ್ಲದೆ, ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಕರು ಕಸ ಹಾಕಲು ಪ್ರಾಯೋಗಿಕವಾಗಿ ಕಸದ ಚೀಲ ಇರಿಸುವುದಾಗಿ ನಿಗಮ ತಿಳಿಸಿದೆ.

ಬಸ್‌ ನಿಲ್ದಾಣಗಳ ಅಂಗಡಿಗಳಲ್ಲಿ ಹಾಗೂ ಕ್ಯಾಂಟೀನ್‌ಗಳಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್‌, ಕಾಗದ ಮತ್ತು ಹಸಿ ಕಸವನ್ನು ಸಮರ್ಪಕ ನಿರ್ವಹಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಕೆಲಸ ಮಾಡುತ್ತಿರುವ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಪರಿಸರ ಜಾಗೃತಿ ಮೇಳ ಏರ್ಪಡಿಸಲಾಗುವುದು. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಾಯೋಗಿಕವಾಗಿ ‘ಸ್ಯಾನಿಟರಿ ನ್ಯಾಪ್‌ಕಿನ್‌ ಇನ್ಸಿನೇಟರ್‌ ಮತ್ತು ನ್ಯಾಪ್‌ಕಿನ್‌ ವೆಂಡಿಂಗ್‌ ಮೆಷಿನ್‌’ ಅಳವಡಿಸಲಾಗಿದೆ. ಇದರ ಸಾಧಕ-ಭಾದಕ ಪರಿಶೀಲಿಸಿ ಇತರೆ ಬಸ್‌ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು. ಬಸ್‌ ಹಾಗೂ ಬಸ್‌ ನಿಲ್ದಾಣಗಳನ್ನೂ ಪ್ಲಾಸ್ಟಿಕ್‌ ಮುಕ್ತಗೊಳಿಸಲು ಸಾರ್ವಜನಿಕರು ಸಹಕರಿಸುವಂತೆ ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಮನವಿ ಮಾಡಿದ್ದಾರೆ.