ಬೆಂಗಳೂರು [ಆ.22]:  ಬಂಡಾಯದ ನೇತೃತ್ವದ ವಹಿಸಿ ಅನರ್ಹಗೊಂಡಿರುವ ರಮೇಶ್‌ ಜಾರಕಿಹೊಳಿ ಅವರಿಗೆ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡುವ ಜೊತೆಗೆ ಜಲಸಂಪನ್ಮೂಲ ಖಾತೆಯನ್ನೇ ನೀಡುವಂತೆ ಅವರ ಸಹೋದರರೂ ಆಗಿರುವ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಈ ಸರ್ಕಾರ ಅಸ್ತಿತ್ವಕ್ಕೆ ಬರಲು ಬುನಾದಿ ಹಾಕಿದ್ದೇ ರಮೇಶ್‌ ಜಾರಕಿಹೊಳಿ. ಹೀಗಾಗಿ, ಅವರಿಗೆ ಹಿಂದೆ ನೀಡಿರುವ ಭರವಸೆಯಂತೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಮಾತಿನಿಂದ ಹಿಂದೆ ಸರಿಯಬಾರದು ಎಂದು ಬಾಲಚಂದ್ರ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸಂಪುಟದ ಮೊದಲ ವಿಸ್ತರಣೆ ನಡೆದ ಬಳಿಕ ಮಂಗಳವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಬಾಲಚಂದ್ರ ಅವರು ತಮಗೆ ಸಚಿವ ಸ್ಥಾನ ನೀಡದಿದ್ದರೂ ಚಿಂತೆಯಿಲ್ಲ. ಸಹೋದರ ರಮೇಶ್‌ಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಅವರ ರಾಜಕೀಯ ಜೀವನವನ್ನೇ ಪಣಕ್ಕಿಟ್ಟು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಶ್ರಮಿಸಿದ್ದಾರೆ ಎಂದು ಬಲವಾಗಿ ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಅನರ್ಹತೆ ಕುರಿತಂತೆ ಸುಪ್ರೀಂಕೋರ್ಟ್‌ ನಡೆ ಗಮನಿಸಿ ಮತ್ತೊಂದು ಹಂತದ ಸಂಪುಟ ವಿಸ್ತರಣೆ ಕೈಗೊಳ್ಳಲಾಗುವುದು. ಆಗ ರಮೇಶ್‌ ಜಾರಕಿಹೊಳಿ ಅವರಿಗೆ ನಿಶ್ಚಿತವಾಗಿ ಸಚಿವ ಸ್ಥಾನ ನೀಡಲಾಗುವುದು. ಖಾತೆಯೂ ಅಷ್ಟೇ. ಜಲಸಂಪನ್ಮೂಲ ಅಥವಾ ಬೇರೊಂದು ಪ್ರಮುಖ ಖಾತೆಯನ್ನೇ ನೀಡಲಾಗುವುದು. ಆದರೆ, ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸಮಜಾಯಿಷಿ ನೀಡಿದರು ಎಂದು ಮೂಲಗಳು ತಿಳಿಸಿವೆ.

ರಮೇಶ್ ಎರಡನೇ ವಸ್ತು ಕಳಕೊಂಡಿದ್ದಾರೆ: ಸೋದರ ಬಗ್ಗೆ ಸತೀಶ್ ವ್ಯಂಗ್ಯ!

ಸದ್ಯದ ಪರಿಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವ ಬಗ್ಗೆ ವರಿಷ್ಠರಿಂದ ಯಾವುದೇ ಮಾಹಿತಿಯಿಲ್ಲ. ಕೇವಲ ರಮೇಶ್‌ ಜಾರಕಿಹೊಳಿ ಅವರೊಬ್ಬರಿಗೇ ಉಪಮುಖ್ಯಮಂತ್ರಿ ಹುದ್ದೆ ನೀಡಿದರೆ ಅದು ಬೇರೊಂದು ರೀತಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಬಹುದು. ಯಾವುದಕ್ಕೂ ವರಿಷ್ಠರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.

ಅಲ್ಲದೆ, ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಇದೇ ವೇಳೆ ಬಾಲಚಂದ್ರ ಜಾರಕಿಹೊಳಿ ಅವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹಿರಿಯ ಶಾಸಕರಾಗಿರುವ ಉಮೇಶ್‌ ಕತ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಅವರಿಗೆ ತಪ್ಪಿಸಿ ಸೋತ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡುವ ಅಗತ್ಯವಿರಲಿಲ್ಲ ಎಂದು  ಹೇಳಿದರು. ಆದರೆ, ಸವದಿ ನೇಮಕವನ್ನು ಸಮರ್ಥಿಸಿಕೊಂಡ ಯಡಿಯೂರಪ್ಪ, ಮುಂಬರುವ ಉಪಚುನಾವಣೆ ಉದ್ದೇಶದಿಂದ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಉಮೇಶ್‌ ಕತ್ತಿ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು. ಅದಕ್ಕಾಗಿ ನಾನು ಪ್ರಯತ್ನವನ್ನೂ ಮಾಡಿದ್ದೇನೆ. ಮುಂದಿನ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವ ಪ್ರಯತ್ನ ಮಾಡುತ್ತೇನೆ ಎಂಬ ಮಾತನ್ನು ಹೇಳಿದರು ಎಂದು ತಿಳಿದುಬಂದಿದೆ.