ಪಿಲ್ಲರ್ ಕೆಡವುವ ಹುಚ್ಚು ನಿರ್ಧಾರ ಕೈಗೊಂಡ ಶಿವಸೇನಾ ಮುಖಂಡ ಸುನಿಲ್ ಸಿತಪ್'ರನ್ನು ಸ್ಥಳೀಯರು "ಬಾಹುಬಲಿ" ಎಂದೇ ಕರೆಯುತ್ತಾರೆ. ಸ್ಥಳೀಯವಾಗಿ ಬಹಳ ಪ್ರಭಾವಿ ಮುಖಂಡರೆನಿಸಿರುವ ಸಿತಪ್ ವಿರುದ್ಧ ಧ್ವನಿ ಎತ್ತುವ ಧೈರ್ಯವಿರುವವರು ಪ್ರದೇಶದಲ್ಲಿ ಯಾರೂ ಇಲ್ಲ. ಕಟ್ಟಡದೊಳಗಿದ್ದ ಯಾವುದೇ ನಿವಾಸಿಗಳು ತಮಗೆ ಏನೇ ಸಮಸ್ಯೆ ಬಂದರೂ ಅದನ್ನು ಹೇಳಿಕೊಳ್ಳಲು ಹೆದರುತ್ತಿದ್ದರೆನ್ನಲಾಗಿದೆ.
ಮುಂಬೈ(ಜುಲೈ 26): ಇಲ್ಲಿಯ ಘಟ್ಕೋಪರ್'ನಲ್ಲಿ ನಿನ್ನೆ ಸಂಭವಿಸಿದ ನಾಲ್ಕಂತಸ್ತಿನ ಕಟ್ಟಡ ಕುಸಿತ ಘಟನೆಯಲ್ಲಿ ಸುನೀಲ್ ಸಿತಪ್ ಎಂಬ ವ್ಯಕ್ತಿಯ ಬಂಧನವಾಗಿದೆ. ಇದೇ ವೇಳೆ, ಶಿವಸೇನಾ ಪಕ್ಷದ ಮುಖಂಡನಾಗಿರುವ ಸುನೀಲ್ ಸಿತಪ್'ನ ಧನದಾಹವು ಈ ದುರಂತಕ್ಕೆ ಕಾರಣ ಎಂಬಂತಹ ವರದಿಗಳು ಬಂದಿವೆ. ನ್ಯೂಸ್18 ವರದಿ ಪ್ರಕಾರ, 8 ವರ್ಷಗಳಿಂದ ಕಟ್ಟಡದ ನೆಲಮಾಳಿಗೆಯಲ್ಲಿ ಎರಡು ಬೆಡ್'ರೂಂಗಳ ಎರಡು ಫ್ಲಾಟ್'ಗಳಿದ್ದವು. ಇವೆರಡನ್ನೂ ಸೇರಿಸಿ ನರ್ಸಿಂಗ್ ಹೋಂ ನಡೆಯುತ್ತಿತ್ತು. ಸುನೀಲ್ ಸಿತಪ್ ಮಾಲಿಕತ್ವದ ಕಟ್ಟಡದ ಈ ನರ್ಸಿಂಗ್ ಹೋಮ್'ನ ಬಾಡಿಗೆ ತಿಂಗಳಿಗೆ 30 ಸಾವಿರವಿತ್ತು. ಇನ್ನೂ ಹೆಚ್ಚು ಹಣ ಸಂಪಾದಿಸುವ ಹುಚ್ಚು ಹಿಡಿಸಿಕೊಂಡ ಸಿತಪ್, ಈ ನರ್ಸಿಂಗ್ ಹೋಮ್'ನ್ನು ಹೋಟೆಲ್ ಮತ್ತು ಗೆಸ್ಟ್ ಹೌಸ್ ಆಗಿ ಪರಿವರ್ತಿಸಲು ನಿರ್ಧರಿಸಿದ್ದರು. ಅದಕ್ಕಾಗಿ ನರ್ಸಿಂಗ್ ಹೋಮ್ ತೆರವುಗೊಳಿಸಿ ಹೋಟೆಲ್'ಗೆ ಅಣಿಗೊಳಿಸುತ್ತಿದ್ದರೆನ್ನಲಾಗಿದೆ. ಆದರೆ, ನೆಲಮಹಡಿಯಲ್ಲಿದ್ದ 2 ಫ್ಲ್ಯಾಟ್'ಗಳನ್ನ ಒಟ್ಟಿಗೆ ಕೂಡಿಲು ಪಿಲ್ಲರ್ ಅಡ್ಡಬರುತ್ತಿತ್ತು. ಆದರೆ, ಆಸೆಬುರುಕ ಸುನೀಲ್ ಸಿತಪ್ ಸ್ವಲ್ಪವೂ ವಿವೇಚನೆಯಿಲ್ಲದೇ ಪಿಲ್ಲರ್'ನ್ನು ಕಿತ್ತುಹಾಕಿಸಿದ್ದಾರೆ. ಅದಾಗಿನಿಂದ ಕಟ್ಟಡವು ಇನ್ನಷ್ಟು ಅಪಾಯಕ್ಕೆ ಸಿಲುಕಿತ್ತು. ಕಟ್ಟಡದ ಇತರ ನಿವಾಸಿಗಳಿಗೆ ಅಪಾಯದ ಅರಿವಾಗಿ ಖಾಲಿ ಮಾಡಲು ನಿರ್ಧರಿಸಿದರಾದರೂ ಬೇರೆ ವಾಸದ ವ್ಯವಸ್ಥೆ ಮಾಡಿಕೊಳ್ಳುವಷ್ಟರಲ್ಲಿ ಈ ದುರಂತ ಸಂಭವಿಸಿಬಿಟ್ಟಿದೆ.
ಬಾಹುಬಲಿ ಲಿಂಕ್..!
ಪಿಲ್ಲರ್ ಕೆಡವುವ ಹುಚ್ಚು ನಿರ್ಧಾರ ಕೈಗೊಂಡ ಶಿವಸೇನಾ ಮುಖಂಡ ಸುನಿಲ್ ಸಿತಪ್'ರನ್ನು ಸ್ಥಳೀಯರು "ಬಾಹುಬಲಿ" ಎಂದೇ ಕರೆಯುತ್ತಾರೆ. ಇತ್ತೀಚಿನ ಬಿಎಂಸಿ ಚುನಾವಣೆಯಲ್ಲಿ ಈತನ ಹೆಂಡತಿಯು ಶಿವಸೇನೆ ಟಿಕೆಟ್'ನಲ್ಲಿ ಸ್ಪರ್ಧಿಸಿ ಬಿಜೆಪಿ ಎದುರು ಸೋತಿದ್ದಳು. ಸ್ಥಳೀಯವಾಗಿ ಬಹಳ ಪ್ರಭಾವಿ ಮುಖಂಡರೆನಿಸಿರುವ ಸಿತಪ್ ವಿರುದ್ಧ ಧ್ವನಿ ಎತ್ತುವ ಧೈರ್ಯವಿರುವವರು ಪ್ರದೇಶದಲ್ಲಿ ಯಾರೂ ಇಲ್ಲ. ಕಟ್ಟಡದೊಳಗಿದ್ದ ಯಾವುದೇ ನಿವಾಸಿಗಳು ತಮಗೆ ಏನೇ ಸಮಸ್ಯೆ ಬಂದರೂ ಅದನ್ನು ಹೇಳಿಕೊಳ್ಳಲು ಹೆದರುತ್ತಿದ್ದರೆನ್ನಲಾಗಿದೆ. ಮುಂಬೈನ ಶಿಥಿಲಾವಸ್ಥೆಯ ಕಟ್ಟಡಗಳನ್ನು ಗುರುತಿಸಿ ತೆರವುಗೊಳಿಸುತ್ತಿರುವ ಬಿಎಂಸಿ, ಸಿತಪ್ ಅವರ ಕಟ್ಟಡಕ್ಕೂ ನೋಟೀಸ್ ನೀಡಿತ್ತು. ಆದರೆ, ಅದು ನಾಮಕವಾಸ್ಥೆಯ ನೋಟೀಸ್ ಆಗಿತ್ತೇ ವಿನಃ ಯಾರೂ ಕೂಡ ಫಾಲೋಅಪ್ ಮಾಡಲಿಲ್ಲ. ಶಿವಸೇನೆ ಮುಖಂಡನ ಹುಚ್ಚುತನ ಮುಂದುವರಿದಿತ್ತು.
