ನೀನೂ ಗೆಲ್ಲಲ್ಲ, ನಿನ್‌ ಮಗನೂ ಗೆಲಲ್ಲ: ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಬಿಎಸ್‌ವೈ ಕಿಡಿ

B S Yeddiyurappa predicts that CM Siddaramaiah would not win in the election
Highlights

‘ಚುನಾವಣೆಯಲ್ಲಿ ನೀನೂ ಗೆಲ್ಲಲ್ಲ, ನಿನ್‌ ಮಗನೂ ಗೆಲ್ಲಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಗದಗ: ‘ಚುನಾವಣೆಯಲ್ಲಿ ನೀನೂ ಗೆಲ್ಲಲ್ಲ, ನಿನ್‌ ಮಗನೂ ಗೆಲ್ಲಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಅಬ್ಬಿಗೇರಿ ಗ್ರಾಮದಲ್ಲಿ ಗುರುವಾರ ಮುಷ್ಟಿಧಾನ್ಯ ಸಂಗ್ರಹ ಅಭಿಯಾನದ ಸಮಾರೋಪದಲ್ಲಿ ಮಾತನಾಡಿ, ಸಿದ್ದರಾಮಯ್ಯ ಒಬ್ಬ ಬುರುಡೆ ದಾಸಯ್ಯ. ರಾಜ್ಯ ಸರ್ಕಾರ ಬದುಕಿದ್ದರೆ ರಾಜ್ಯದಲ್ಲಿ ಇಷ್ಟೊಂದು ರೈತರ ಆತ್ಮಹತ್ಯೆಗಳು ಆಗುತ್ತಿರಲಿಲ್ಲ, ಕಾಂಗ್ರೆಸ್‌ನದ್ದು ಬೇಜವಾಬ್ದಾರಿ ಸರ್ಕಾರ, ಸಿದ್ದರಾಮಯ್ಯ ಬೇಜವಾಬ್ದಾರಿ ಮುಖ್ಯಮಂತ್ರಿ ಎಂದು ಬಿಎಸ್‌ವೈ ಕಿಡಿಕಾರಿದರು.

‘ಬಿಜೆಪಿ ಪ್ರಣಾಳಿಕೆಯನ್ನು ನಾವು ಈಗಲೇ ಹೇಳುವುದಿಲ್ಲ. ನಾನೇನಾದರೂ ಅದನ್ನು ಬಹಿರಂಗಪಡಿಸಿದರೆ ಸಿದ್ದರಾಮಯ್ಯ ಅವುಗಳನ್ನು ಕಾಪಿ ಮಾಡಿ, ನಾನೇ ಮಾಡಿದ್ದೇನೆ ಎಂದು ಬುರುಡೆ ಬಿಡಲು ಪ್ರಾರಂಭಿಸುತ್ತಾರೆ. ಅದಕ್ಕಾಗಿಯೇ ಅವರನ್ನು ನಾನು ಬುರುಡೆ ದಾಸಯ್ಯ ಎಂದು ಕರೆಯುತ್ತೇನೆ’ ಎಂದು ಹೇಳಿದರು.

ಸೋಲುವ ಭೀತಿ:

ಈಗ ಸಿದ್ದು ನಿಂತ ನೆಲವೇ ಕುಸಿಯುತ್ತಿದೆ, ಸ್ವಂತ ಜಿಲ್ಲೆಯಲ್ಲೇ ನಿಲ್ಲೋಕೆ ಯೋಗ್ಯತೆಯಿಲ್ಲದ ಅವರು, ಬೇರೆ ಕ್ಷೇತ್ರಕ್ಕಾಗಿ ಹುಡುಕಾಟ ಮಾಡುತ್ತಿದ್ದಾರೆ. ಐದು ವರ್ಷ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಪೂರ್ಣಗೊಳಿಸಿದ್ದೇನೆ ಎಂದು ಜಂಭದಿಂದ ಹೇಳಿಕೊಳ್ಳುವ ಸಿದ್ದರಾಮಯ್ಯ ಅವರಿಗೆ ಸದ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎನ್ನುವ ಬಗ್ಗೆಯೇ ನಿಖರತೆ ಇಲ್ಲ. ಇದರಿಂದ ಅವರಿಗೆ ಸೋಲುವ ಭೀತಿ ಕಾಡುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಬಿಎಸ್‌ವೈ ಹೇಳಿದರು.

ರಕ್ತದಲ್ಲಿ ಬರೆದುಕೊಡ್ತೇನೆ: ರೈತರು ಸಂಕಷ್ಟದಲ್ಲಿದ್ದಾಗ ಧೈರ್ಯ ತುಂಬಬೇಕು. ಅದನ್ನು ಬಿಟ್ಟು ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿ ಮೆರೆದಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಯೋಗ್ಯತೆಗೆ ರೈತರ ಹೊಲಗಳಿಗೆ ಪಂಪ್‌ ಸೆಟ್‌ಗಳಿಗೆ ವಿದ್ಯುತ್‌ ನೀಡಿಲ್ಲ. ಮುಂದೆ ಬಿಜೆಪಿ ಸರ್ಕಾರ ರಚನೆಯಾಗಲಿದ್ದು, ಅನ್ನದಾತನ ಸಮಸ್ಯೆ ಬಗೆಹರಿಸುತ್ತೇನೆ. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ. ನಮ್ಮ ಸರ್ಕಾರ ಬಂದರೆ ರೈತರ ಪಂಪ್‌ ಸೆಟ್‌ಗಳಿಗೆ ನಿರಂತರ 12 ಗಂಟೆ ವಿದ್ಯುತ್‌ ನೀಡುತ್ತೇವೆ. ಬದುಕಿನ ಕೊನೆಯುಸಿರು ಇರೋವರೆಗೂ ರೈತರೊಂದಿಗೆ ಇರುತ್ತೇವೆ ಎಂದರು.

ಲೋಕಾಯುಕ್ತ ಬಲ ಪಡಿಸಿ ಅಕ್ರಮ ಬಯಲಿಗೆ

ಸಿದ್ದರಾಮಯ್ಯ ನಮ್ಮ ಸರ್ಕಾರದಲ್ಲಿ ಯಾವುದೇ ಹಗರಣಗಳು ನಡೆದಿಲ್ಲ ಎಂದು ನಿರಂತರವಾಗಿ ರಾಜ್ಯದ ಜನತೆಗೆ ಸುಳ್ಳು ಹೇಳುತ್ತಾರೆ. ಆದರೆ ನಿಷ್ಪಕ್ಷಪಾತ ತನಿಖೆ ನಡೆಸುವ ಸ್ವತಂತ್ರ ಸಂಸ್ಥೆಯಾದ ಲೋಕಾಯುಕ್ತವನ್ನು ಅಸ್ಥಿರಗೊಳಿಸಿ, ಎಸಿಬಿ ಮೂಲಕ ತಮ್ಮ ಹಿಂಬಾಲಕರು ಮಾಡುತ್ತಿರುವ ಅಕ್ರಮ ಮುಚ್ಚಿಕೊಂಡಿದ್ದಾರೆ. ರಾಜ್ಯದ ಜನತೆಗೆ ಇದು ಗೊತ್ತಾಗಿದೆ. ಮುಂಬರುವ ಚುನಾವಣೆಯಲ್ಲಿ ನಿಮ್ಮನ್ನು ಕಿತ್ತೊಗೆದು ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಸ್ಥಾಪಿಸುತ್ತಾರೆ. ಆಗ ನಿಮ್ಮ ಅಕ್ರಮಗಳೇನು ಎಂದು ತಿಳಿಯುತ್ತದೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

loader