ನವದೆಹಲಿ/ಬೀಜಿಂಗ್‌ (ಮಾ. 12): ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕೆಂಬ ಪ್ರಸ್ತಾಪ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಂದೆ ಬುಧವಾರ ಚರ್ಚೆಗೆ ಬರಲಿದೆ.

ಸಿಆರ್‌ಪಿಎಫ್‌ನ 40 ಯೋಧರನ್ನು ಬಲಿ ಪಡೆದ ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯ ಬಳಿಕ ಅಜರ್‌ ವಿರುದ್ಧ ಅಮೆರಿಕ, ಬ್ರಿಟನ್‌ ಹಾಗೂ ಫ್ರಾನ್ಸ್‌ ದೇಶಗಳು ಭದ್ರತಾ ಮಂಡಳಿಯಲ್ಲಿ ನಿರ್ಣಯ ಮಂಡನೆ ಮಾಡಿವೆ. ಈಗಾಗಲೇ 3 ಬಾರಿ ಭಾರತ ಹಾಗೂ ಇತರೆ ದೇಶಗಳು ಮಂಡನೆ ಮಾಡಿದ್ದ ನಿರ್ಣಯಕ್ಕೆ ಅಡ್ಡಿಪಡಿಸಿದ್ದ ಚೀನಾ, ಈ ಬಾರಿ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಸ್ಪಷ್ಟಉತ್ತರ ಕೊಡಲು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌ ಅವರು ನಿರಾಕರಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಠಿಣ ನಿಯಮ ಹಾಗೂ ಮಾನದಂಡಗಳನ್ನು ಹೊಂದಿದೆ. ಕೇವಲ ಮಾತುಕತೆ ಮೂಲಕವಷ್ಟೇ ಒಂದು ಜವಾಬ್ದಾರಿಯುತ ಪರಿಹಾರ ಹುಡುಕಬಹುದಾಗಿದೆ ಎಂದು ಸೋಮವಾರ ತಿಳಿಸಿದ್ದಾರೆ.