ಬೆಂಗಳೂರು [ಸೆ.22]:  ಇಡೀ ದೇಶದ ಬಡ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ‘ಆಯುಷ್ಮಾನ್‌ ಭಾರತ್‌’ ಆಯೋಗ್ಯ ಯೋಜನೆ ಒಂದು ವರ್ಷ ಪೂರೈಸುತ್ತಿದ್ದು, ಅರ್ಹ ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಕರೆ ನೀಡಿದ್ದಾರೆ.

ಆಯುಷ್ಮಾನ್‌ ಭಾರತ್‌ ಯೋಜನೆ ಸೆ.23ಕ್ಕೆ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಜಾಗೃತಿ ಜಾಥಾಗೆ ಶನಿವಾರ ನಗರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಆಯುಷ್ಮಾನ್‌ ಭಾರತ್‌ ಯೋಜನೆಯಡಿ ರಾಜ್ಯದ 2,509 ಸರ್ಕಾರಿ ಹಾಗೂ 434 ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟು 2,943 ಆಸ್ಪತ್ರೆಗಳಲ್ಲಿ 1,650 ಬಗೆಯ ಚಿಕಿತ್ಸೆ ಲಭ್ಯವಿದ್ದು, ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳಿಗೆ ಪ್ರತಿ ಕುಟುಂಬ .5 ಲಕ್ಷ ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಬಡತನ ರೇಖೆಗಿಂತ ಮೇಲಿನ (ಎಪಿಎಲ್‌) ಕುಟುಂಬಗಳು ಕೂಡ ವರ್ಷಕ್ಕೆ .1.50 ಲಕ್ಷ ವರೆಗೆ ಉಚಿತ ಚಿಕಿತ್ಸಾ ವೆಚ್ಚ ಪಡೆಯಬಹುದು. ಯೋಜನೆಯ ಸೌಲಭ್ಯ ಪಡೆಯಲು ಆಧಾರ್‌ ಕಾರ್ಡ್‌ ಮತ್ತು ಪಡಿತರ ಚೀಟಿ ನೀಡಿ ಬೆಂಗಳೂರು ಒನ್‌, ಕರ್ನಾಟಕ ಒನ್‌, ಸೇವಾ ಸಿಂಧು ಕೇಂದ್ರಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಆರೋಗ್ಯಕಾರ್ಡ್‌’ ಪಡೆಯಬಹುದಾಗಿದೆ. ಯೋಜನೆ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಜಾಗೃತಿ ಜಾಥಾ ನಡೆಸಲಾಗುವುದು ಎಂದರು ತಿಳಿಸಿದರು.

ಬಡ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ ‘ಆಯುಷ್ಮಾನ್‌ ಭಾರತ್‌’ವರ್ಷ ಪೂರೈಸುತ್ತಿದ್ದು, ಈ ಕುರಿತು ಜನರಲ್ಲಿ ಅರಿವು ಮೂಡಿಸಲು ಜಾಥಾ ನಡೆಸಲಾಗುತ್ತಿದೆ. ಕೇಂದ್ರದ ಯೋಜನೆಯಲ್ಲಿ ರಾಜ್ಯದ ಆರೋಗ್ಯ ಕರ್ನಾಟಕ ಯೋಜನೆಯನ್ನು ವಿಲೀನಗೊಳಿಸಲಾಗಿದೆ. ಯೋಜನೆಯನ್ನು ಎಲ್ಲ ನಾಗರಿಕರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಂತರ ನಡೆದ ಜಾಥಾ, ನಗರದ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯಿಂದ ಆರಂಭವಾಗಿ ಶಿವಾಜಿನಗರ ಬಸ್‌ ನಿಲ್ದಾಣ ಮಾರ್ಗವಾಗಿ ಘೋಷ ಆಸ್ಪತ್ರೆ ತಲುಪಿತು. ಈ ವೇಳೆ ರಂಗ ಕಲಾವಿದರು ಬೀದಿ ನಾಟಕ ಹಾಗೂ ಜಾನಪದ ಕಾಲಾವಿದರು ಡೊಳ್ಳು ಕುಣಿತದ ಮೂಲಕ ಯೋಜನೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಜಾಥಾದಲ್ಲಿ ಸಂಸದ ಪಿ.ಸಿ.ಮೋಹನ್‌, ಅನರ್ಹ ಶಾಸಕ ರೋಷನ್‌ ಬೇಗ್‌, ವೈದ್ಯರು, ಶುಶ್ರೂಷಕರು, ನೂರಾರು ವೈದ್ಯ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.