ನವದೆಹಲಿ[ಜೂ.15]: ಹಿಂದೂಗಳ ಪವಿತ್ರಯಾತ್ರಾ ಸ್ಥಳಗಳ ಪೈಕಿ ಒಂದಾದ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಉಗ್ರರು ದಾಳಿ ನಡೆಸಬಹುದು ಎಂದು ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮನ ಜನ್ಮಭೂಮಿ ಇರುವ ನಗರದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

ದಾಳಿಗೆ ಸಜ್ಜಾಗಿರುವ ಉಗ್ರರು, ನೇಪಾಳದ ಮೂಲಕ ಉತ್ತರಪ್ರದೇಶವನ್ನು ಪ್ರವೇಶಿಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಅಯೋಧ್ಯೆಗೆ ಆಗಮಿಸುವ ಎಲ್ಲಾ ರೈಲು, ಬಸ್‌ಗಳ ಪ್ರಯಾಣಿಕರ ಮೇಲೆ ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ.

2005ರ ಜೂನ್‌ 5ರಂದು ಅಯೋಧ್ಯೆ ಮೇಲೆ ದಾಳಿ ನಡೆಸುವ ಉಗ್ರರ ಯತ್ನವೊಂದನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದವು. ಅಲ್ಲದೆ 5 ಉಗ್ರರನ್ನು ಹತ್ಯೆಗೈದು, 4 ಉಗ್ರರನ್ನು ಸೆರೆಹಿಡಿಯುವಲ್ಲಿ ಭದ್ರತಾ ಪಡೆಗಳು ಸಫಲವಾಗಿದ್ದವು. ಈ ಪ್ರಕರಣದ ತೀರ್ಪು ಇದೇ ಜೂನ್‌ 18ರಂದು ಪ್ರಕಟಗೊಳ್ಳಲಿದೆ.

ಮತ್ತೊಂದೆಡೆ ಲೋಕಸಭೆಗೆ ನೂತನವಾಗಿ ಆಯ್ಕೆಯಾಗಿರುವ ಶಿವಸೇನೆಯ 18 ಸಂಸದರು, ಶೀಘ್ರವೇ ರಾಮಮಂದಿರ ನಿರ್ಮಾಣ ಮಾಡಬೇಕೆಂಬ ಬೇಡಿಕೆಗೆ ಇನ್ನಷ್ಟುಬಲತುಂಬುವ ನಿಟ್ಟಿನಲ್ಲಿ ಪಕ್ಷದ ಅಧ್ಯಕ್ಷ ಉದ್ಧವ್‌ ಠಾಕ್ರೆ ಜೊತೆಗೂಡಿ ಜೂ.16ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಈ ಸಮಯವನ್ನೇ ಉಗ್ರರು ತಮ್ಮ ದಾಳಿಗೆ ಬಳಸಿಕೊಳ್ಳುತ್ತಿರಬಹುದು ಎಂಬ ಶಂಕೆ ಇದೆ.