ನವದೆಹಲಿ (ಅ. 30): ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ 2019 ರ ಲೋಕಸಭೆ ಚುನಾವಣೆ ಒಳಗೆ ತೆರೆ ಬೀಳಬಹುದು ಎಂಬ ನಿರೀಕ್ಷೆಗೆ ಸರ್ವೋಚ್ಚ ನ್ಯಾಯಾಲಯ ಸೋಮವಾರ ತಣ್ಣೀರೆರಚಿದೆ.

ವಿವಾದದ ತುರ್ತು ವಿಚಾರಣೆಗೆ ನಿರಾಕರಿಸಿರುವ ನ್ಯಾಯಾಲಯ ‘ಸೂಕ್ತ ಪೀಠವು ವಿಚಾರಣಾ ದಿನಾಂಕವನ್ನು ಜನವರಿಯಲ್ಲಿ ನಿರ್ಧರಿಸಲಿದೆ’ ಎಂದಿದೆ. ಹೀಗಾಗಿ ವಿಚಾರಣೆ ಮುಂದಿನ ವರ್ಷದ ಆರಂಭಕ್ಕೆ ಮುಂದಕ್ಕೆ ಹೋಗಿದ್ದು, ಸದ್ಯದ ಮಟ್ಟಿಗೆ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಗುವುದು ಅನುಮಾನವಾಗಿದೆ.

ವಿವಾದಿತ ಭೂಮಿಯನ್ನು 3 ಭಾಗವಾಗಿ ಮಾಡಿ ಹಂಚಿದ್ದ 2010 ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸೋಮವಾರ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ| ರಂಜನ್ ಗೊಗೋಯ್, ನ್ಯಾ| ಎಸ್.ಕೆ. ಕೌಲ್ ಹಾಗೂ ನ್ಯಾ| ಕೆ.ಎಂ. ಜೋಸೆಫ್ ಅವರ ಪೀಠ, ‘ಸೂಕ್ತ ಪೀಠವು ಜನವರಿಯಲ್ಲಿ ವಿಚಾರಣಾ ದಿನಾಂಕವನ್ನು ನಿರ್ಧರಿಸಲಿದೆ. ಆದರೆ ವಿಚಾರಣೆ ಯಾವಾಗ ಆರಂಭವಾಗಲಿದೆ ಎಂಬುದನ್ನು ಹೇಳಲಾಗದು’ ಎಂದಿತು.

‘ನಮಗೆ ನಮ್ಮದೇ ಆದ ಆದ್ಯತೆಗಳಿವೆ. ‘ಸೂಕ್ತ ಪೀಠ’ದ ಮುಂದೆ ಅರ್ಜಿಯು ವಿಚಾರಣೆಗೆ ಬಂದಾಗ ವಿಚಾರಣೆ ಜನವರಿಯಲ್ಲಿ ನಡೆಯಬೇಕೋ? ಮಾರ್ಚ್‌ನಲ್ಲೋ ಅಥವಾ ಏಪ್ರಿಲ್‌ನಲ್ಲೋ ಎಂಬುದನ್ನು ಅದು ತೀರ್ಮಾನಿಸಲಿದೆ’ ಎಂದು ಹೇಳಿತು. ಇದೇ ವೇಳೆ ಮಹತ್ವದ ಸ್ಪಷ್ಟನೆಯೊಂದನ್ನು ನೀಡಿದ ಮುಖ್ಯ ನ್ಯಾಯಾಧೀಶರು, ‘ಅಪೀಲುಗಳು ಜನವರಿ ಮೊದಲ ವಾರದಲ್ಲಿ ಪೀಠವೊಂದರ ಮುಂದೆ ಬರಲಿದ್ದು, ಆ ಪೀಠವು ವಿಚಾರಣೆ ನಡೆಸುವುದಿಲ್ಲ.