ಮಹಿಳೆ ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ ಆಕೆ ಮೊದಲು ತಾಯಿಯಾಗಿರುತ್ತಾಳೆ. ಹಸುಗೂಸಿಗೆ ಹಾಲುಣಿಸುವುದು ಕೂಡಾ ತಾಯ್ತನದ ಪ್ರತೀಕ. ಆಸ್ಟ್ರೇಲಿಯಾದ ಸಂಸದೆಯೊಬ್ಬರು ಸಂಸತ್ತಿನಲ್ಲಿಯೇ ತನ್ನ ಹಸುಗೂಸಿಗೆ ಹಾಲುಣಿಸುವ ಮೂಲಕ ಗಮನ ಸೆಳೆದಿದ್ದಾರೆ.
ಆಸ್ಟ್ರೇಲಿಯಾ (ಮೇ.11): ಮಹಿಳೆ ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ ಆಕೆ ಮೊದಲು ತಾಯಿಯಾಗಿರುತ್ತಾಳೆ. ಹಸುಗೂಸಿಗೆ ಹಾಲುಣಿಸುವುದು ಕೂಡಾ ತಾಯ್ತನದ ಪ್ರತೀಕ. ಆಸ್ಟ್ರೇಲಿಯಾದ ಸಂಸದೆಯೊಬ್ಬರು ಸಂಸತ್ತಿನಲ್ಲಿಯೇ ತನ್ನ ಹಸುಗೂಸಿಗೆ ಹಾಲುಣಿಸುವ ಮೂಲಕ ಗಮನ ಸೆಳೆದಿದ್ದಾರೆ.
ಕ್ವಿನ್ಸ್ ಲ್ಯಾಂಡ್ ನ ಸೆನೆಟರ್ ಆಗಿರುವ ಗ್ರೀನ್ಸ್ ಪಕ್ಷದ ಸಹ-ಉಪನಾಯಕಿ ಲಾರಿಸ್ಸಾ ವಾಟರ್ಸ್ ಹಸುಗೂಸಿಗೆ ಹಾಲುಣಿಸಿದವರು. ಎರಡನೇ ಮಗುವಿನ ಬಾಣಂತನದಲ್ಲಿರುವ ಇವರು ಮೇಲ್ಮನೆಯ ಕಲಾಪಕ್ಕೆ ಕೆಲವು ಕಾಲ ಗೈರು ಹಾಜರಾಗಿದ್ದರು. ಮಂಗಳವಾರ ಪ್ರಮುಖ ಮತದಾನವಿದ್ದು ತಪ್ಪಿಸಿಕೊಳ್ಳುವಂತೆಯೇ ಇರಲಿಲ್ಲ. ಹಾಗಾಗಿ ತನ್ನ ಪುಟ್ಟ ಮಗು ಅಲಿಯಾಳನ್ನು ಎತ್ತಿಕೊಂಡೇ ಸಂಸತ್ತಿಗೆ ಬಂದರು. ಮಗು ಅತ್ತಾಗ ಸಂಸತ್ತಿನೊಳಗೆ ಧೈರ್ಯವಾಗಿ ಹಾಲುಣಿಸಿದರು. ಫೆಡರಲ್ ಪಾರ್ಲಿಮೆಂಟಿನಲ್ಲಿ ತಾಯಿಯ ಎದೆಹಾಲು ಕುಡಿದ ಮೊದಲ ಮಗು ಎನ್ನುವ ಖ್ಯಾತಿಗೆ ಅಲಿಯಾ ಪಾತ್ರವಾಗಿದ್ದಾಳೆ.
ಸಂಸತ್ತಿನಲ್ಲಿ ಎದೆಹಾಲು ಕುಡಿಸಲು ಆಸ್ಟ್ರೇಲಿಯಾದಲ್ಲಿ ಅವಕಾಶವಿರಲಿಲ್ಲ. 2003 ರಲ್ಲಿ ವಿಕ್ಟೋರಿಯಾದ ಸಂಸದೆ ಕ್ರಿಸ್ಟಿ ಮಾರ್ಷಲ್ ಅವರನ್ನು 11 ದಿನದ ಹೆಣ್ಣು ಮಗುವಿಗೆ ಹಾಲುಣಿಸಲು ನಿರಾಕರಿಸಿ ಹೊರಗೆ ಕಳುಹಿಸಲಾಗಿತ್ತು. ಅನಿವಾರ್ಯ ಹಿನ್ನೆಲೆಯಲ್ಲಿ ಕಳೆದ ವರ್ಷ ಫ್ಯಾಮಿಲಿ ಫ್ರೆಂಡ್ಲಿ ಹೆಸರಿನಲ್ಲಿ ಹೊಸ ನಿಯಮವನ್ನು ರೂಪಿಸಿ ಅವಕಾಶ ನೀಡಲಾಯಿತು.
