ಬೆಂಗಳೂರು[ಜು.10]: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅಶ್ಲೀಲ ಆಡಿಯೋ ಮಿಮಿಕ್ರಿ ಇದ್ದಂತೆ ಇದ್ದು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಷಡ್ಯಂತ್ರ ರೂಪಿಸಿ ತಮ್ಮ ತೇಜೋವಧೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಜೆಡಿಎಸ್‌ನ ಮಾಜಿ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಸ್ಪಷ್ಟಪಡಿಸಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಅತೃಪ್ತ ಶಾಸಕರೊಂದಿಗೆ ವಾಸ್ತವ್ಯ ಹೂಡಿರುವ ಅವರು ಮಂಗಳವಾರ ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ ನಮ್ಮ ಪಕ್ಷದವರು, ಬೇರೆ ಪಕ್ಷದವರು ಅಥವಾ ನನಗಾಗದವರು ಈ ಕೆಲಸ ಮಾಡಿರಬೇಕು. ಆಡಿಯೋ ಸಂಭಾಷಣೆಯು ಮಿಮಿಕ್ರಿ ಇದ್ದಂತೆ ಇದೆ. ಇಂತಹ ಸಮಯದಲ್ಲಿ ಇದೆಲ್ಲಾ ಸಹಜ. ಆಧುನಿಕ ತಂತ್ರಜ್ಞಾನದಲ್ಲಿ ಏನು ಬೇಕಾದರೂ ಮಾಡಬಹುದು. ಅದನ್ನೆಲ್ಲಾ ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಾನು ಏನು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಹೇಳಿದರು.

ಆಡಿಯೋದ ಕೊನೆಯಲ್ಲಿ ಇಂಥವರು ಮಂತ್ರಿಯಾಗಬೇಕಾ ಎಂದು ಹೇಳಿದ್ದಾರೆ. ಇದನ್ನು ಗಮನಿಸಿದರೆ ದುರುದ್ದೇಶದಿಂದ ಯಾರೋ ಷಡ್ಯಂತ್ರ ರೂಪಿಸುವುದು ಸ್ಪಷ್ಟವಾಗಿ ಕಾಣುತ್ತದೆ. ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ರಾಜಕೀಯದಲ್ಲಿ ಬೆಳವಣಿಗೆಗಳು ನಡೆಯುತ್ತಿರುವ ಸಮಯದಲ್ಲಿ ಇಂಥದ್ದೆಲ್ಲಾ ಹುಟ್ಟುಹಾಕುತ್ತಾರೆ ಎಂದರು.

Close