ಒಂದೇ ಹೆಸರು, ಜನ್ಮ ದಿನ, ಪಾಸ್‌ಪೋರ್ಟ್ ನೋಂದಣಿ ಕೇಂದ್ರದ ಗೊಂದಲದಿಂದಾಗಿ ಮಾಡದ ತಪ್ಪಿಗೆ ಸೌದಿ ಅರೇಬಿಯಾದಲ್ಲಿ ಬಂಧಿತನಾಗಿದ್ದ ತುರುವೇಕೆರೆ ನಿವಾಸಿ, ಮರದ ವ್ಯಾಪಾರಿ ನಯಾಜ್ ಅಹಮದ್ (೪೧) ಗುರುವಾರ ಸಂಜೆ ಬಂಧ ಮುಕ್ತವಾಗಿದ್ದಾರೆ.

ತುರುವೇಕೆರೆ (ಜೂ.01): ಒಂದೇ ಹೆಸರು, ಜನ್ಮ ದಿನ, ಪಾಸ್‌ಪೋರ್ಟ್ ನೋಂದಣಿ ಕೇಂದ್ರದ ಗೊಂದಲದಿಂದಾಗಿ ಮಾಡದ ತಪ್ಪಿಗೆ ಸೌದಿ ಅರೇಬಿಯಾದಲ್ಲಿ ಬಂಧಿತನಾಗಿದ್ದ ತುರುವೇಕೆರೆ ನಿವಾಸಿ, ಮರದ ವ್ಯಾಪಾರಿ ನಯಾಜ್ ಅಹಮದ್ (೪೧) ಗುರುವಾರ ಸಂಜೆ ಬಂಧ ಮುಕ್ತವಾಗಿದ್ದಾರೆ.
ಸೌದಿ ಅರೇಬಿಯಾ ದೇಶಕ್ಕೆ ಉಮ್ರಾ ಯಾತ್ರೆಗಾಗಿ ತೆರಳಿದ್ದಾಗ ನಯಾಜ್ ಅಹಮದ್ ಬಂಧಿತರಾಗಿದ್ದರು. ಒಂದೂವರೆ ತಿಂಗಳ ಹಿಂದೆ ನಯಾಜ್, ತುಮಕೂರಿನ ಗೆಳೆಯರೊಂದಿಗೆ ಉಮ್ರಾ ಯಾತ್ರೆಗಾಗಿ ತೆರಳಿದ್ದಾಗ, ಅವರನ್ನು ವಿಮಾನ ನಿಲ್ದಾಣದಲ್ಲಿಯೇ ವಿಚಾರಣೆಗಾಗಿ ವಶಕ್ಕೆ ಪಡೆದು ಬಂಧಿಸಿದ್ದರು. ಇದರಿಂದ ನೊಂದಿದ್ದ ನಯಾಜ್ ಕುಟುಂಬಸ್ಥರು, ವಿದೇಶಾಂಗ ಇಲಾಖೆಗೆ ಮನವಿ ಸಲ್ಲಿಸಿದ್ದರು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸೌದಿ ಅರೇಬಿಯಾ ದೇಶದ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ರವಾನಿಸಿ ನಯಾಜ್ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಸೌದಿ ಸರ್ಕಾರಕ್ಕೆ ದಾಖಲೆ ನೀಡಿದ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು, ನಯಾಜ್ ಅವರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಯಾಜ್ ಬಿಡುಗಡೆ ವೇಳೆ ಅವರ ಕುಟುಂಬದ ಕೆಲವರಿದ್ದು, ಸ್ವಾಗತಿಸಿದರು. ಎಲ್ಲರೂ ಒಟ್ಟಿಗೆ ಭಾರತಕ್ಕೆ ಪ್ರಯಾಣ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ: 
ಮರದ ವ್ಯಾಪಾರಿಯಾಗಿದ್ದ ತುರುವೇಕೆರೆ ನಿವಾಸಿ ನಯಾಜ್ ಅಹಮದ್, ಉಮ್ರಾ ಯಾತ್ರೆಗಾಗಿ ೩೧ ಮಂದಿ ಸ್ನೇಹಿತರೊಂದಿಗೆ ಸೌದಿ ದೇಶಕ್ಕೆ ತೆರಳಿದ್ದರು. ನಯಾಜ್ ಅಹಮದ್ ಹೆಸರಿನ ವ್ಯಕ್ತಿ ಸೌದಿಯಲ್ಲಿ ಅಪರಾಧವೆಸಗಿ ಪರಾರಿಯಾಗಿದ್ದ. ಆತನ ವಿರುದ್ಧ ಸೌದಿಯಲ್ಲಿ ಬಂಧನ ವಾರಂಟ್ ಜಾರಿಯಾಗಿತ್ತು. ಆತನ ಹೆಸರು, ಜನ್ಮ ದಿನ, ಪಾಸ್‌ಪೋರ್ಟ್ ನೋಂದಣಿ ಮಾಡಿಸಿದ್ದ ಕೇಂದ್ರ (ಬೆಂಗಳೂರು) ಎಲ್ಲವೂ ತಾಳೆಯಾಗಿದ್ದರಿಂದ ತುರುವೇಕೆರೆ ನಿವಾಸಿ ನಯಾಜ್ ಅವರನ್ನು ಸೌದಿ ದೇಶದ ಪೊಲೀಸರು ಬಂಧಿಸಿದ್ದರು.
ಸಂಸದ ಭೇಟಿ:
ನಯಾಜ್ ಅಹಮದ್ ಬಿಡುಗಡೆಗೊಳಿಸುವಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಶ್ರಮಿಸಿದ್ದರು. ಅವರು ಗುರುವಾರ ನಯಾಜ್ ಕುಟಂಬಸ್ಥರನ್ನು ಭೇಟಿಯಾಗಿ ನಯಾಜ್ ಬಿಡುಗಡೆ ವಿಷಯ ತಿಳಿಸಿ, ಸಾಂತ್ವನ ಹೇಳಿದ್ದರು.