ಬೆಂಗಳೂರು :  ಕುಂದಗೋಳ ಮತ್ತು ಚಿಂಚೋಳಿ ಉಪ ಚುನಾವಣೆ ಪ್ರಚಾರ ಭರಾಟೆ ದಿನೇದಿನೇ ಜೋರಾಗುತ್ತಿದ್ದರೆ ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಸಚಿವ ರಮೇಶ್‌ ಜಾರಕಿಹೊಳಿ ಸರಣಿ ಸಭೆ ಮುಂದುವರೆಸಿದ್ದಾರೆ. ಬುಧವಾರ ಅಥಣಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಮಹೇಶ್‌ ಕುಮಟಳ್ಳಿ ಅವರು ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ.

ಮಹೇಶ್‌ ಕುಮಟಳ್ಳಿ ಮೇ 9ರಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಪ್ರಚಾರ ನಡೆಸಿದ್ದರು. ಕಳೆದ ಒಂದು ತಿಂಗಳಿಂದ ರಮೇಶ್‌ ಜಾರಕಿಹೊಳಿ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಮಂಗಳವಾರ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್‌ ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದ ಬೆನ್ನಲ್ಲೇ ಮಹೇಶ್‌ ಕುಮಟಳ್ಳಿ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್‌ ಕುಮಟಳ್ಳಿ, ನಮ್ಮ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾದ ಅನಿವಾರ್ಯತೆ ಇಲ್ಲ. ಕುಂದಗೋಳದಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಮಾಡುತ್ತಿದ್ದೇನೆ. ಪ್ರಸ್ತುತ ಕೃಷ್ಣಾ ನದಿಯಲ್ಲಿ ನೀರಿಲ್ಲ. ಹೀಗಾಗಿ ಅದರ ಫೈಲ್‌ ತೆಗೆದುಕೊಂಡು ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚಿಸಲು ಬಂದಿದ್ದೇನೆ ಎಂದಿದ್ದಾರೆ.

ಸಿ.ಪಿ.ಯೋಗೇಶ್ವರ್‌ ಹಾಗೂ ರಮೇಶ್‌ ಜಾರಕಿಹೊಳಿ ಭೇಟಿ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಅವರನ್ನು ಎಲ್ಲರೂ ಭೇಟಿಯಾಗುತ್ತಾರೆ. ಅದಕ್ಕೆಲ್ಲಾ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರೂ ಪಕ್ಷ ಬಿಟ್ಟು ಹೋಗುವುದಿಲ್ಲ. ನಾವೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.