ಅಜಾತಶತ್ರು, ಮುತ್ಸದ್ಧಿ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಇನ್ನು ನೆನಪು ಮಾತ್ರ. ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಇದಕ್ಕೂ ಮುಂಚೆ ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಒಮ್ಮೆ ಸೋನಿಯಾ ಗಾಂಧಿ ಜೊತೆ ಮಜವಾದ ಪ್ರಸಂಗ ನಡೆಯಿತು.
ನವದೆಹಲಿ (ಆ. 21): 1998 ರಲ್ಲಿ ಜಯಲಲಿತಾ ತಿರುಗಿಬಿದ್ದಾಗ ಒಂದು ವೋಟಿನಿಂದ ಅಧಿಕಾರ ಕಳೆದುಕೊಂಡು ಸದನದಿಂದ ಪ್ರಧಾನಿ ಕಚೇರಿಗೆ ಬಂದಾಗ ಅಟಲ್ ಅಕ್ಷರಶಃ ಕಣ್ಣೀರು ಹಾಕುತ್ತಿದ್ದರಂತೆ.
ಇವರನ್ನು ಹೇಗೆ ಸಮಾಧಾನಪಡಿಸುವುದು ಎಂದು ಸಚಿವರು ಪರದಾಡುತ್ತಿದ್ದಾಗ ಅಟಲ್‌ಜಿ ಏಕ್ ವೋಟ್ ಸಿರ್ಫ್ ಏಕ್ ವೋಟ್ ಎಂದು ಹೇಳಿ ಬೇಸರ ವ್ಯಕ್ತಪಡಿಸುತ್ತಿದ್ದರಂತೆ. ನಂತರ ಕೂಡಲೇ ಮಂತ್ರಿಗಳನ್ನು ಕರೆದು ರಾಷ್ಟ್ರಪತಿಗಳ ಬಳಿ ಹೋಗೋಣ, ಹೋಗುವಾಗ ಸರ್ಕಾರಿ ವಾಹನ, ಬರುವಾಗ ಮಾತ್ರ ಸ್ವಂತ ಖಾಸಗಿ ವಾಹನದಲ್ಲಿ ಎಂದು ಹೇಳಿ ರಾಷ್ಟ್ರಪತಿಗಳಿಗೆ ರಾಜೀನಾಮೆ ಸಲ್ಲಿಸಿ ವಾಪಸ್ ಪಾರ್ಲಿಮೆಂಟ್‌ಗೆ ಬಂದರಂತೆ.
ಕಾರಿಡಾರ್‌ನಲ್ಲಿ ಅಟಲ್‌ಜಿ ಸಾವಕಾಶವಾಗಿ ನಡೆದುಕೊಂಡು ಹೊರಟಾಗ ಎದುರಿಗೆ ಸೋನಿಯಾ ಗಾಂಧಿ ಬರುತ್ತಿದ್ದರಂತೆ. ಕೂಡಲೇ ಸೋನಿಯಾರನ್ನು ನೋಡಿ ಅಟಲ್‌ಜಿ ಮುಗುಳ್ನಗೆ ಬೀರಿದಾಗ ಹೇಗೆ ಪ್ರತಿಕ್ರಿಯೆ ಕೊಡುವುದು ಎಂದು ಗೊತ್ತಾಗದೆ ಸೋನಿಯಾ ಸುಮ್ಮನೆ ಇದ್ದರಂತೆ. ಆಗ ಅಟಲ್‌ಜಿ ಸೋನಿಯಾರಿಗೆ ಮೊಹತರಮಾ ತಾಜ್ ತೋ ಉತಾರ ಹಿ ದಿಯಾ, ಅಬ್ ತೋ ಮುಸ್ಕುರಾವೋ ಎಂದರಂತೆ. ಮೇಡಂ, ಕಿರೀಟವನ್ನಂತೂ ತೆಗೆಸಿಯೇಬಿಟ್ರಿ ಈಗಲಾದರೂ ನಗಿ!
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
