ನವದೆಹಲಿ[ಸೆ.16]: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ನೂತನ ಮೋಟಾರು ಕಾಯ್ದೆಯಲ್ಲಿನ ಭಾರೀ ದಂಡದ ಬಗ್ಗೆ ಭಾರೀ ಪರ- ವಿರೋಧ ಚರ್ಚೆ ಆರಂಭವಾಗಿರುವ ಬೆನ್ನಲ್ಲೇ, ಮುಂಬರುವ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಇದೇ ದಂಡದ ವಿಷಯನ್ನು ತನ್ನ ಬ್ರಹ್ಮಾಸ್ತ್ರವಾಗಿ ಬಳಸಲು ಕಾಂಗ್ರೆಸ್ ನಿರ್ಧರಿಸಿದೆ. ಇದು ಬಿಜೆಪಿಗೆ ಹೊಸ ಸಮಸ್ಯೆ ತಂದೊದೊಡ್ಡಿದೆ.

ಮಹಾರಾಷ್ಟ್ರ, ಹರ್ಯಾಣ ಮತ್ತು ಜಾರ್ಖಂಡ್‌ನಲ್ಲಿ ಹಾಲಿ ಬಿಜೆಪಿ ಅಧಿಕಾರದಲ್ಲಿದೆ. ಮೂರೂ ರಾಜ್ಯಗಳಲ್ಲಿ ಮರಳಿ ಅಧಿಕಾರಕ್ಕೆ ಬರಲು ಪಕ್ಷ ಸಾಕಷ್ಟು ಕಾರ್ಯತಂತ್ರವನ್ನೂ ರೂಪಿಸಿದೆ. ಆದರೆ ಇದೇ ಹಂತದಲ್ಲಿ ನೂತನ ಮೋಟಾರು ಕಾಯ್ದೆ ಜಾರಿಯಾಗಿರುವುದು ಪಕ್ಷದ ರಾಜ್ಯ ನಾಯಕರಿಗೆ ಹೊಸ ಸಮಸ್ಯೆ ತಂದಿಟ್ಟಿದೆ. ಕೇಂದ್ರದಲ್ಲಿನ ತಮ್ಮದೇ ಸರ್ಕಾರ ಜಾರಿಗೆ ತಂದ ಕಾಯ್ದೆಯನ್ನು ತಾವೇ ಜಾರಿಗೊಳಿಸದೇ ಹೋದಲ್ಲಿ ಅದು ಕೇಂದ್ರ ಬಿಜೆಪಿಗೆ ಸಾಕಷ್ಟು ಮುಜುಗರ ತರಲಿದೆ. ಒಂದು ವೇಳೆಗೆ ಜಾರಿಗೆ ತಂದರೆ ಅದು ಜನರ ಆಕ್ರೋಶಕ್ಕೆ ಕಾರಣವಾಗಬಹುದು ಎಂಬ ಭೀತಿ ರಾಜ್ಯ ನಾಯಕರನ್ನು ಕಾಡಿದೆ.

ಟ್ರಾಫಿಕ್ ನಿಯಮ ಉಲ್ಲಂಘನೆ, ಭಾರೀ ದಂಡ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ಕಾರಣಕ್ಕಾಗಿ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಸರ್ಕಾರಗಳು ಇದುವರೆಗೆ ಕಾಯ್ದೆ ಜಾರಿಗೆ ತಂದಿಲ್ಲ. ಹರ್ಯಾಣ ಮಾತ್ರ ಈಗಾಗಲೇ ಕಾಯ್ದೆ ಜಾರಿಗೆ ತಂದಿದೆ.

ಇನ್ನು ಸಂಚಾರ ನಿಯಮ ಉಲ್ಲಂಘನೆ ದಂಡವನ್ನು ಚುನಾವಣಾ ವಿಷಯವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಪ್ರಸ್ತಾಪಿಸಿರುವ ಹರ್ಯಾಣ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷೆ ಕುಮಾರಿ ಶೆಲ್ಜಾ, ಖಂಡಿತವಾಗಿಯೂ ಈ ವಿಷಯವನ್ನು ನಾವು ಪ್ರಮುಖವಾಗಿ ಜನರ ಮುಂದಿಡಲಿದ್ದೇವೆ. ಈ ಕುರಿತು ನಾವು ದೊಡ್ಡ ಆಂದೋಲನವನ್ನೇ ನಡೆಸಲಿದ್ದೇವೆ. ಹೊಸ ಕಾಯ್ದೆ ಬಗ್ಗೆ ಈಗಾಗಲೇ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ