ಗುವಾಹಟಿ [ಜು.13]: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟುಬಿಗಡಾಯಿಸಿದ್ದು, 21 ಜಿಲ್ಲೆಗಳ ಸುಮಾರು 9 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ಮಳೆ ಸಂಬಂಧಿತ ಘಟನೆಗಳಿಗೆ ಇದುವರೆಗೆ 6 ಜನ ಬಲಿಯಾಗಿದ್ದಾರೆ. ಪ್ರವಾಹ ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಬುಲಾವ್‌ ನೀಡಲಾಗಿದೆ.

ರಾಜ್ಯದ 33 ಜಿಲ್ಲೆಗಳ ಪೈಕಿ 17 ಜಿಲ್ಲೆಗಳ 4.23 ಲಕ್ಷ ಜನ ಗುರುವಾರದವರೆಗೆ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದರು. ಆದರೆ ನದಿಗಳಲ್ಲಿ ನೀರಿನ ಮಟ್ಟಹೆಚ್ಚಾದ ಪರಿಣಾಮ ಶುಕ್ರವಾರ ಇನ್ನೂ ಜಿಲ್ಲೆಗಳ ಜನ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಾಜ್ಯದಲ್ಲಿ ಬ್ರಹ್ಮಪುತ್ರ, ಡಿಖೋವ್‌, ಜಿಯಾ ಭೋರೋಲಿ, ಪುತಿಮರಿ ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿವೆ. ಖಾಜಿರಂಗ ನ್ಯಾಷನಲ್‌ ಪಾರ್ಕ್ನಲ್ಲಿ ಪ್ರವಾಹದ ನೀರು ನುಗ್ಗಿದ್ದು, ಶೇ.40ರಷ್ಟುಉದ್ಯಾನವನ ನೀರಿನಲ್ಲಿ ಮುಳುಗಡೆ ಆಗಿದೆ. ಇದೇ ವೇಳೆ ಪ್ರವಾಹದಿಂದಾಗಿ 13 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದೆ. ರಾಜ್ಯದಲ್ಲಿ ಮಳೆ ಮುಂದುವರಿದಿರುವುದರಿಂದ, ಪರಿಸ್ಥಿತಿ ಇನ್ನಷ್ಟುಬಿಗಡಾಯಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.