ಮುಂಬೈ (ಸೆ. 05): ಕೆಲದಿನಗಳ ಕಾಲ ಅಬ್ಬರಿಸಿ ಬೊಬ್ಬಿರಿದು ಶಾಂತವಾಗಿದ್ದ ವರುಣ ಮತ್ತೆ ಮುಂಬೈನಲ್ಲಿ ಅಬ್ಬರಿಸುತ್ತಿದ್ದು, ನಗರದ ಹಲವೆಡೆ ಭಾರೀ ಮಳೆ ಸುರಿದಿದೆ. ಜೊತೆಗೆ ಬುಧವಾರ ಮುಂಜಾನೆಯಿಂದ ಆರಂಭವಾಗುವ 24 ಗಂಟೆಗಳ ಅವಧಿಯಲ್ಲಿ ಮುಂಬೈ ಹಾಗೂ ಉಪನಗರಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಪರಿಸ್ಥಿತಿ ಎದುರಿಸಲು ಸಜ್ಜಾಗಿ ಎಂದು ಹವಾಮಾನ ಇಲಾಖೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಮುಂಬೈ ಮಹಾನಗರ ವ್ಯಾಪ್ತಿಯ 150 ಹವಾಮಾನ ಕೇಂದ್ರಗಳ ಪೈಕಿ ಸುಮಾರು 100 ಕೇಂದ್ರಗಳಲ್ಲಿ 200 ಮಿಮಿ ಮಳೆ ದಾಖಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಳೆ ಉಂಟಾಗಿದ್ದು, ಮುಂಬೈ ನಗರ, ಉಪನಗರಗಳು, ಥಾಣೆ ಹಾಗೂ ಪಾಲ್ಘರ್‌ನಲ್ಲಿ ಭಾರೀ ಮಳೆಯಾಗಿದೆ.

ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ವರುಣ ತಾಂಡವವಾಡಿದ್ದು ಕಳೆದ 24 ಗಂಟೆಯಲ್ಲಿ 300 ಮಿಮಿ ಮಳೆಯಾಗಿದೆ. ಮುಂದಿನ 24 ಗಂಟೆ ಭಾರೀ ಮಳೆಯಾಗುವ ಸಂಭವವಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ.