"ಬಾವಿಗೆ ಬೀಳುವುದೂ ದಿಟ್ಟ ನಿರ್ಧಾರ, ಆತ್ಮಹತ್ಯೆ ಮಾಡಿಕೊಳ್ಳುವುದೂ ದಿಟ್ಟ ನಿರ್ಧಾರವೇ... ನೀವು ಏನಾದರೂ ಮಾಡಬೇಕೆಂದಿದ್ದರೆ ಮೊದಲ ತೆರಿಗೆ ಆಡಳಿತದ ವಿಚಾರದಲ್ಲಿ ಸುಧಾರಣೆ ತರುವ ಮೂಲಕ ಹೆಜ್ಜೆ ಮುಂದಿಡಿರಿ"
ನವದೆಹಲಿ(ನ. 18): ಐನ್ನೂರು ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಸರಕಾರದ ಕ್ರಮವನ್ನು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಬಲವಾಗಿ ವಿರೋಧಿಸಿದ್ದಾರೆ. ಸರಕಾರದ ಉದ್ದೇಶ ಒಳ್ಳೆಯದಿರಬಹುದು, ಆದರೆ ಸರಿಯಾಗಿ ಯೋಜಿಸಿಲ್ಲ ಎಂದು ಶೌರಿ ಟೀಕಿಸಿದ್ದಾರೆ.
ಹಿಂದೆ ವಾಜಪೇಯಿ ಸರಕಾರದಲ್ಲಿ ಸಚಿವರಾಗಿದ್ದ ಅರುಣ್ ಶೌರಿ, ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂಬ ಮಾತನ್ನು ಅಲ್ಲಗಳೆದಿದ್ದಾರೆ.
"ಬಾವಿಗೆ ಬೀಳುವುದೂ ದಿಟ್ಟ ನಿರ್ಧಾರ, ಆತ್ಮಹತ್ಯೆ ಮಾಡಿಕೊಳ್ಳುವುದೂ ದಿಟ್ಟ ನಿರ್ಧಾರವೇ... ನೀವು ಏನಾದರೂ ಮಾಡಬೇಕೆಂದಿದ್ದರೆ ಮೊದಲ ತೆರಿಗೆ ಆಡಳಿತದ ವಿಚಾರದಲ್ಲಿ ಸುಧಾರಣೆ ತರುವ ಮೂಲಕ ಹೆಜ್ಜೆ ಮುಂದಿಡಿರಿ" ಎಂದು ಸರಕಾರಕ್ಕೆ ಅರುಣ್ ಶೌರಿ ಸಲಹೆ ನೀಡಿದ್ದಾರೆ.
ನೋಟ್ ಬ್ಯಾನ್ ಮಾಡುವುದರಿಂದ ಕಪ್ಪು ಹಣ ನಿಗ್ರಹಿಸಬಹುದು ಎಂಬುದು ಸರಕಾರದ ತಪ್ಪು ಕಲ್ಪನೆ ಎಂದು ಈ ವೇಳೆ ಶೌರಿ ತಿಳಿಹೇಳಿದ್ದಾರೆ.
"ಜನರು ಕಪ್ಪುಹಣವನ್ನು ಕ್ಯಾಷ್ ರೂಪದಲ್ಲಿ ಇಟ್ಟುಕೊಳ್ಳುವುದಿಲ್ಲ. ತಮ್ಮ ಹಾಸಿಗೆಯಡಿಯಲ್ಲಿ ಅವನ್ನು ಇಡುವುದಿಲ್ಲ. ವಿದೇಶದಲ್ಲಿ ಅವರ ಕಪ್ಪು ಹಣ ಶೇಖರಣೆಯಾಗಿರುತ್ತದೆ. ಅಲ್ಲಿಯೂ ಅವರು ಡಾಲರ್ ನೋಟ್'ನಲ್ಲೋ ಅಥವಾ ಗನ್ನಿಬ್ಯಾಗ್'ಗಳಲ್ಲೋ ಇಟ್ಟಿರುವುದಿಲ್ಲ ಎಂಬುದು ತಿಳಿದಿರಲಿ. ಆಸ್ತಿ, ಆಭರಣ, ಸ್ಟಾಕ್'ಮಾರ್ಕೆಟ್ ಅಥವಾ ಬೇರಿನ್ಯಾವುದೋ ರೂಪದಲ್ಲಿ ಅವರ ಕಪ್ಪುಹಣವು ವಿದೇಶಗಳಲ್ಲಿ ಅಡಗಿಕೊಂಡಿರುತ್ತದೆ" ಎಂದು ಅರುಣ್ ಶೌರಿ ತಿಳಿಸಿದ್ದಾರೆ.
ಭ್ರಷ್ಟಾಚಾರ ಪ್ರಕರಣಗಳಲ್ಲಿ ಏನೂ ಕೈಗೊಳ್ಳದ ಸರಕಾರ ಈಗ ಏಕಾಏಕಿ ನೋಟ್ ರದ್ದು ಮಾಡಿದ್ದು ಸರಿಯಲ್ಲ ಎಂದು ಅರುಣ್ ಶೌರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಲಂಚು ಕೊಡುವ ಮತ್ತು ಲಂಚು ನೀಡುವವರ ವಿರುದ್ಧ ಏನೂ ಕ್ರಮಕ್ಕೆ ಮುಂದಾಗಿಲ್ಲ. ಸಾಕ್ಷ್ಯಾಧಾರಗಳ ಕೊರತೆಯಿಂದ ಅಕ್ರಮ ಆಸ್ತಿ ಪ್ರಕರಣಗಳು ಕೋರ್ಟ್'ನಲ್ಲಿ ಸೋಲನುಭವಿಸಿವೆ. ಶಾರದಾ ಚಿಟ್'ಫಂಡ್ ಹಗರಣ, ವ್ಯಾಪಂ ಹಗರಣದಲ್ಲಿ ಏನೂ ಕ್ರಮ ಕೈಗೊಳ್ಳಲಿಲ್ಲ. ಹಸನ್ ಅಲಿ ತಪ್ಪಿಸಿಕೊಳ್ಳಲು ಬಿಟ್ಟಿರಿ, ಮೊಯಿನ್ ಖುರೇಷಿ, ವಿಜಯ್ ಮಲ್ಯ, ಲಲಿತ್ ಮೋದಿ ಇವರೆಲ್ಲಾ ದೇಶದಿಂದ ಹೊರಗೆ ಆರಾಮವಾಗಿದ್ದಾರೆ. ಹೀಗಿರುವಾಗ ಸರಕಾರಿ ಅಧಿಕಾರಿಗಳು ಏನು ಭಾವಿಸಿಯಾರು?" ಎಂದು ಶೌರಿ ಪ್ರಶ್ನಿಸಿದ್ದಾರೆ.
