ನವದೆಹಲಿ/ನ್ಯೂಯಾರ್ಕ್: ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಸಣ್ಣ ಪ್ರಮಾಣದ ಕ್ಯಾನ್ಸರ್‌ಗೆ ತುತ್ತಾಗಿರುವುದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಮಂಗಳವಾರ ಅಮೆರಿಕದ ನ್ಯೂಯಾರ್ಕ್ನ ಆಸ್ಪತ್ರೆಯೊಂದಲ್ಲಿ ಶಸ್ತ್ರಚಿಕಿತ್ಸೆಗೆ ಗುರಿಯಾಗಿದ್ದು, ಅವರಿಗೆ ವೈದ್ಯರು 2 ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ಇನ್ನು ಕೆಲ ವಾರಗಳ ಕಾಲ ಅವರು ಅಮೆರಿಕದಲ್ಲೇ ಉಳಿಯುವುದು ಖಚಿತವಾಗಿದೆ.

ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ, ಜೇಟ್ಲಿ ನಿರ್ವಹಿಸುತ್ತಿದ್ದ ಹಣಕಾಸು ಖಾತೆಯ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಹೀಗಾಗಿ ಫೆ.1ರಂದು ಪಿಯೂಷ್‌ ಗೋಯಲ್‌ ಅವರೇ ಕೇಂದ್ರದ ಸಾಮಾನ್ಯ ಬಜೆಟ್‌ ಮಂಡಿಸುವುದು ಬಹುತೇಕ ಖಚಿತವಾಗಿದೆ.

ಕ್ಯಾನ್ಸರ್‌ ಪತ್ತೆ: ಕಳೆದ ವರ್ಷವಷ್ಟೇ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಗುರಿಯಾಗಿದ್ದ ಸಚಿವ ಅರುಣ್‌ ಜೇಟ್ಲಿ, ಬಳಿಕವೂ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಕೆಲ ದಿನಗಳ ಹಿಂದೆ ಉನ್ನತ ತಪಾಸಣೆಗೆಂದು ಅಮೆರಿಕಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಜೀವಕೋಶಗಳ ಕ್ಯಾನ್ಸರ್‌ ತಗುಲಿರುವುದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್ನ ಆಸ್ಪತ್ರೆಯಲ್ಲಿ ಮಂಗಳವಾರ ಜೇಟ್ಲಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಜೇಟ್ಲಿಗೆ 2 ವಾರಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.

ಗೋಯಲ್‌ಗೆ ಹೊಣೆ: ಜೇಟ್ಲಿ ಗೈರಿನ ಹಿನ್ನೆಲೆಯಲ್ಲಿ ಅವರ ಬಳಿ ಇದ್ದ ಹಣಕಾಸು ಖಾತೆಯನ್ನು ತಾತ್ಕಾಲಿಕವಾಗಿ ರೈಲ್ವೆ ಖಾತೆ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ವಹಿಸಲಾಗಿದೆ. ಪ್ರಧಾನಿ ಅವರ ಸಲಹೆಯಂತೆ ರಾಷ್ಟ್ರಪತಿಯವರು ಸಚಿವ ಅರುಣ್‌ ಜೇಟ್ಲಿ ಅವರ ಬಳಿ ಇದ್ದ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಖಾತೆಯನ್ನು ತಾತ್ಕಾಲಿಕವಾಗಿ ಪಿಯೂಷ್‌ ಗೋಯಲ್‌ ಅವರಿಗೆ ವಹಿಸಿರುತ್ತಾರೆ. ಈ ಖಾತೆಗಳನ್ನು ಗೋಯಲ್‌ ಅವರು ಹೆಚ್ಚುವರಿಯಾಗಿ ನಿಭಾಯಿಸಲಿದ್ದಾರೆ. ಅರುಣ್‌ ಜೇಟ್ಲಿ ಅವರು ಅನಾರೋಗ್ಯದಿಂದ ಚೇತರಿಸಿಕೊಳ್ಳುವವರೆಗೆ ಅಥವಾ ಹಣಕಾಸು ಹಾಗೂ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯವನ್ನು ನಿಭಾಯಿಸಲು ಶಕ್ತರಾಗುವವರೆಗೂ ಅವರು ಅವರ ಖಾತೆ ರಹಿತ ಸಚಿವರಾಗಿ ಮುಂದುವರಿಯಲಿದ್ದಾರೆ ಎಂದು ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.