2004ರಲ್ಲಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಮದುವೆಯಾಗಲು ಮುಂದಾದಾಗ ಆ ಕಾರ್ಯಕ್ರಮಕ್ಕೆ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದರು!

ನವದೆಹಲಿ [ಆ.25]: ಕ್ರಿಕೆಟ್‌ ಅಭಿಮಾನಿಯೂ ಆಗಿದ್ದ ಅರುಣ್‌ ಜೇಟ್ಲಿ ಅವರು ಹಲವು ಆಟಗಾರರ ಜತೆ ಅತ್ಯುತ್ತಮ ಒಡನಾಟ ಹೊಂದಿದ್ದರು. ಅದು ಯಾವ ಮಟ್ಟಿಗೆ ಇತ್ತು ಎಂದರೆ, 2004ರಲ್ಲಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಮದುವೆಯಾಗಲು ಮುಂದಾದಾಗ ಆ ಕಾರ್ಯಕ್ರಮಕ್ಕೆ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದರು!

ಜೇಟ್ಲಿ ಅವರು 2004ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಅವರಿಗೆ ಅಶೋಕ ರಸ್ತೆಯ 9ನೇ ಸಂಖ್ಯೆಯ ಮನೆ ಮಂಜೂರಾಗಿತ್ತು. ಆದರೆ ಅಲ್ಲಿ ಅವರು ವಾಸವಾಗಿರಲಿಲ್ಲ. ಸೆಹ್ವಾಗ್‌ ಅವರು ಮದುವೆಯಾಗುವ ವಿಷಯ ತಿಳಿದು ತಮ್ಮ ಮನೆಯಲ್ಲೇ ವಿವಾಹ ಮಾಡಿಕೊಳ್ಳುವಂತೆ ಸಲಹೆ ಮಾಡಿದ್ದರು. 

ಇದಕ್ಕಾಗಿ ಸೆಹ್ವಾಗ್‌ ತಂದೆಯನ್ನೂ ಒಪ್ಪಿಸಿದ್ದರು. ಬಳಿಕ ಸರ್ಕಾರಿ ಬಂಗಲೆಯಲ್ಲಿ ಗಣ್ಯರಿಗಾಗಿ ಅನೇಕ ಸಿದ್ಧತೆಗಳನ್ನು ಕಲ್ಪಿಸಿಕೊಟ್ಟಿದ್ದರು. ಕ್ರೀಡೆ, ಬಾಲಿವುಡ್‌ ಹಾಗೂ ರಾಜಕೀಯ ರಂಗದ ಅನೇಕ ಗಣ್ಯರು ಆ ವಿವಾಹದಲ್ಲಿ ಭಾಗಿಯಾಗಿದ್ದರು. ಆದರೆ ಜೇಟ್ಲಿ ಅವರಿಗೆ ಪಾಲ್ಗೊಳ್ಳಲು ಆಗಿರಲಿಲ್ಲ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿದ್ದ ಕಾರಣ ಅವರು ಅಲ್ಲಿ ವ್ಯಸ್ತರಾಗಿದ್ದರು.