14 ದಿನಗಳ ಪೊಲೀಸ್‌ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಪಾಕ್‌ ಪ್ರಜೆ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅದರಂತೆ ಪಾಕಿಸ್ತಾನ ಪ್ರಜೆಗಳಾದ ಸಮೀರಾ, ಕಿರಣ ಹಾಗೂ ಮಹಮದ್‌ ಹಾಗೂ ಅವರಿಗೆ ಸಹಕರಿಸಿದ ಆರೋಪದಡಿ ಬಂಧಿತನಾಗಿದ್ದ ಕೇರಳ ಮೂಲದ ಮಹಮದ್‌ ಸಿಹಾಬ್‌ನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬುಧವಾರ ಸೇರಿದ್ದಾರೆ.

ಬೆಂಗಳೂರಿನಲ್ಲಿ ಸೆರೆ ಸಿಕ್ಕ ಮೂವರ ಹೇಳಿಕೆ ಪೂರ್ತಿ ನಂಬದ ಪೊಲೀಸರು | ಇಲ್ಲಿದ್ದರೂ ಪಾಕ್‌ನಲ್ಲಿದ್ದವರ ಜತೆ ಸಂಪರ್ಕದಲ್ಲಿದ್ದ ಬಂಧಿತರು

ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿದ ಆರೋಪದಡಿ ಸೆರೆಯಾದ ಪಾಕಿಸ್ತಾನ ಪ್ರಜೆಗಳು ಹೆಣೆದಿರುವ ‘ಪ್ರೇಮಕತೆ'ಯನ್ನು ಇನ್ನೂ ಸಂಪೂರ್ಣವಾಗಿ ನಂಬದಿರುವ ಸಿಸಿಬಿ ಅಧಿಕಾರಿಗಳು, ಈಗ ಆ ಪ್ರಜೆಗಳು ಹೊಂದಿದ್ದ ತಾಯ್ನಾಡಿನ ಸಂಬಂಧದ ಹಿಂದಿರುವ ರಹಸ್ಯ ಶೋಧನೆಗೆ ಮುಂದಾಗಿದೆ.

14 ದಿನಗಳ ಪೊಲೀಸ್‌ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಪಾಕ್‌ ಪ್ರಜೆ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅದರಂತೆ ಪಾಕಿಸ್ತಾನ ಪ್ರಜೆಗಳಾದ ಸಮೀರಾ, ಕಿರಣ ಹಾಗೂ ಮಹಮದ್‌ ಹಾಗೂ ಅವರಿಗೆ ಸಹಕರಿಸಿದ ಆರೋಪದಡಿ ಬಂಧಿತನಾಗಿದ್ದ ಕೇರಳ ಮೂಲದ ಮಹಮದ್‌ ಸಿಹಾಬ್‌ನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬುಧವಾರ ಸೇರಿದ್ದಾರೆ.

ಈವರೆಗೆ ವಿಚಾರಣೆ ವೇಳೆ ಪಾಕ್‌ ಪ್ರಜೆಗಳಿಂದ ಸಂಗ್ರಹಿಸಿರುವ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು, ಇನ್ನು ಮುಂದೆ ಪಾಕಿಸ್ತಾನ ಪ್ರಜೆಗಳ ಮೂಲದ ಪತ್ತೆಗೆ ಕೇಂದ್ರ ತನಿಖಾ ಸಂಸ್ಥೆಗಳ ಸಹಕಾರ ಪಡೆದು ದೀರ್ಘಾವಧಿ ಕಾರ್ಯಾಚರಣೆ ಪ್ರಾರಂಭಿಸಿದೆ.

ಈ ಸಂಬಂಧ ‘ಕನ್ನಡಪ್ರಭ' ಜತೆ ಮಾತನಾಡಿದ ಹೆಚ್ಚುವರಿ ಪೊಲೀಸ್‌ ಆಯುಕ್ತ ಎಸ್‌. ರವಿ ಅವರು, ಈವರೆಗೆ ಭಯೋತ್ಪಾದಕ ಸಂಘಟನೆಗಳ ಜತೆ ಬಂಧಿತ ಮೂವರು ಪಾಕಿಸ್ತಾನ ಪ್ರಜೆಗಳು ಸಂಪರ್ಕ ಹೊಂದಿದ್ದರೂ ಎಂಬ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ. ಹಾಗೆಂದು ಅವರು ಹೇಳಿರುವ ಪ್ರೇಮ ಕತೆ ಮೇಲೂ ನಮಗೆ ವಿಶ್ವಾಸ ಮೂಡಿಲ್ಲ ಎಂದು ಸ್ಪಷ್ಟಪಡಿಸಿದರು.

ತನಿಖೆ ಸಲುವಾಗಿ ಅವರನ್ನು ಹದಿನಾಲ್ಕು ದಿನಗಳು ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿತ್ತು. ಈ ಅವಧಿಯಲ್ಲಿ ಆರೋಪಿಗಳಿಂದ ಕೆಲವು ಮಾಹಿತಿ ಸಂಗ್ರಹಿಸಿದ್ದೇವೆ. ಪಾಕಿಸ್ತಾನದಿಂದ ಬೆಂಗಳೂರುವರೆಗಿನ ಪ್ರಯಾಣದ ಕುರಿತು ತಮ್ಮದೇ ರೀತಿಯಲ್ಲಿ ಅವರು ಹೇಳಿಕೊಂಡಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ನೆಲೆ ನಿಂತ ಬಳಿಕವು ಪಾಕಿಸ್ತಾನದಲ್ಲಿನ ಕೆಲವರ ಜತೆ ಅವರು ಸಂಪರ್ಕದಲ್ಲಿದ್ದ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಅವರ ಹೇಳಿಕೆಯ ಸತ್ಯಶೋಧನೆ ನಡೆದಿದೆ ಎಂದು ಹೇಳಿದರು.

ಇದುವರೆಗೆ ಪಾಕ್‌ ಮಹಿಳೆ ಜತೆ ಕೇರಳದ ಸಿಹಾಬ್‌ ಪ್ರೇಮವು ಸತ್ಯವೇ ಎಂಬುದು ಸ್ಪಷ್ಟವಾಗಿಲ್ಲ. ಪೊಲೀಸ್‌ ಕಸ್ಟಡಿಯಲ್ಲಿ ಸಂಗ್ರಹಿಸಿರುವ ಮಾಹಿತಿ ಆಧರಿಸಿ ತನಿಖೆ ಮುಂದುವರಿದಿದ್ದು, ಈ ತನಿಖೆಯು ಸಮಯ ತೆಗೆದುಕೊಳ್ಳಲಿದೆ. ತನಿಖೆ ಪೂರ್ಣಗೊಂಡ ಬಳಿಕ ಖಚಿತವಾಗಲಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತರು ತಿಳಿಸಿದರು.

ಎಂಟು ತಿಂಗಳಿಂದ ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಕರಾಚಿ ಮೂಲದ ಸಮೀರಾ ಅಲಿಯಾಸ್‌ ನಜ್ಮಾ, ಮಹಮದ್‌ ಖಾಸಿಫ್‌ ಹಾಗೂ ಅವರ ಪತ್ನಿ ಝೈನೈಬ್‌ ಅಲಿಯಾಸ್‌ ಕಿರಣ ಹಾಗೂ ಈ ಪ್ರಜೆಗಳಿಗೆ ಸಹಕರಿಸದ ಕೇರಳ ಮೂಲದ ಮಹಮದ್‌ ಸಿಹಾಬ್‌ ಅವರನ್ನು ಮೇ 25ರಂದು ಸಿಸಿಬಿ ತಂಡವು ಬಂಧಿಸಿತು. ಈ ತನಿಖೆ ವೇಳೆ ಸಮೀರಾ ಮತ್ತು ಸಿಹಾಬ್‌ ನಡುವೆ ಪ್ರೇಮ ಕತೆ ಬೆಳಕಿಗೆ ಬಂದಿತ್ತು.

ಪಾಕ್‌ನಲ್ಲಿ ಮತ್ತೊಂದು ಮದುವೆ: ಕೇರಳ ಮೂಲದ ಮಹಮದ್‌ ಸಿಹಾಬ್‌ ಜತೆ ಮದುವೆಗೂ ಮುನ್ನ ಪಾಕಿಸ್ತಾನದಲ್ಲೇ ಸಮೀರಾ ಮತ್ತೊಂದು ವಿವಾಹವಾಗಿದ್ದಳು. ಆ ಸಂಬಂಧದಲ್ಲೇ ಆಕೆ ಗರ್ಭಧರಿಸಿದ್ದಳು. ಭಾರತಕ್ಕೆ ಪ್ರಯಾಣಿಸುವ ಮುನ್ನ ಸಮೀರಾಳಿಗೆ ನೇಪಾಳದ ಕಠ್ಮಂಡುವಿನಲ್ಲಿ ಸಿಹಾಬ್‌ ಗರ್ಭಪಾತ ಮಾಡಿಸಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕತಾರ್‌ನಲ್ಲಿ ಭಾರತೀಯ ಸಿಹಾಬ್‌ ಜತೆ ಸಮೀರಾಳ ಪ್ರೇಮ ವಿಚಾರ ತಿಳಿದ ಆಕೆ ಸೋದರರು, ಸಮೀರಾಳನ್ನು ಪಾಕಿಸ್ತಾನಕ್ಕೆ ಕರೆದೊಯ್ದಿದ್ದರು. ಆ ವೇಳೆ ಅವರು ಸಹೋದರಿಯನ್ನು ಸಂಬಂಧಿಕನೊಟ್ಟಿಗೆ ಬಲವಂತವಾಗಿ ಮದುವೆ ಮಾಡಿಸಿದ್ದರು. ಮದುವೆ ನಂತರವು ಸಿಹಾಬ್‌ ಮೇಲೆ ಸಮೀರಾ ಪ್ರೀತಿ ಹೊಂದಿದ್ದಳು. ಆಗ ತನ್ನ ಸೋದರ ಸಂಬಂಧಿ ಕಿರಣ ಸಹಕಾರ ಪಡೆದು ಸಿಹಾಬ್‌ನನ್ನು ಆಕೆ ಸಂಪರ್ಕಿಸಿದ್ದಳು. ಆನಂತರ ತನ್ನಲ್ಲಿಗೆ ಪ್ರಿಯತಮೆಯನ್ನು ಸಿಹಾಬ್‌ ಕರೆಸಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮೊದಲು ಕತಾರ್‌ನಲ್ಲಿ ಸಿಹಾಬ್‌ ಮತ್ತು ಸಮೀರಾ ವಿವಾಹವಾಗಿದ್ದರು. ಆಗ ಆಕೆ ಗರ್ಭಾವತಿ ಆಗಿದ್ದಳು ಎನ್ನಲಾಗಿದೆ. ವಿಚಾರಣೆ ಬಳಿಕ ಮತ್ತೊಂದು ಕತೆ ಬಂದಿದೆ. ಹೀಗಾಗಿ ಪಾಕಿಸ್ತಾನ ಪ್ರಜೆಗಳ ಪ್ರೇಮ ಪ್ರಕರಣವು ಗೋಜಲು ಗೋಜಲಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರ ಪೂರ್ವಾಪರ ಕುರಿತು ಖಚಿತ ಮಾಹಿತಿ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.