ಬೆಂಗಳೂರು (ಸೆ. 25): ಆರೋಗ್ಯ ಕರ್ನಾಟಕ ಯೋಜನೆಗೆ ಸೇರ್ಪಡೆ ಮಾಡಿಸಿ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಯಶಸ್ವಿನಿ ಕಾರ್ಡ್‌ ರದ್ದು ಪಡಿಸಿ, ಯಶಸ್ವಿನಿಯನ್ನು ಆರೋಗ್ಯ ಕರ್ನಾಟಕ ಯೋಜನೆ ಅಡಿ ವಿಲೀನಗೊಳಿಸಿ 7 ತಿಂಗಳಾಯಿತು. ಇನ್ನು ಈ ಯೋಜನೆಯು ಕೇಂದ್ರ ಸರ್ಕಾರದ ‘ಆಯುಷ್ಮಾನ್‌ ಭಾರತ’ದೊಂದಿಗೆ ವಿಲೀನವಾಗಿ ‘ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ’ ಎಂಬುದಾಗಿ ಬದಲಾಗಲಿದೆ.

ಆದಾಗ್ಯೂ ರಾಜ್ಯದ 18 ಜಿಲ್ಲೆಗಳ 30 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಆರೋಗ್ಯ ಕರ್ನಾಟಕ ಕಾರ್ಡ್‌ ನೀಡಿಲ್ಲ. ಪರಿಣಾಮ- ಕಳೆದ ಏಳು ತಿಂಗಳಿನಿಂದ ಈ ಜಿಲ್ಲೆಗಳ ಫಲಾನುಭವಿಗಳು ಅತ್ತ ಆರೋಗ್ಯ ಕರ್ನಾಟಕದ ಸೌಲಭ್ಯಗಳು ಇಲ್ಲದೆ, ಇತ್ತ ಯಶಸ್ವಿನಿ ಯೋಜನೆಯ ಫಲವೂ ದೊರೆಯದೇ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

ರಾಜ್ಯ ಸರ್ಕಾರವು ಮಾರ್ಚ್ ತಿಂಗಳಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತಂದಿದ್ದು, ಬೆಂಗಳೂರು ನಗರ ಜಿಲ್ಲೆ, ಮಂಡ್ಯ, ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ, ಕಲಬುರಗಿ ಹಾಗೂ ಬಳ್ಳಾರಿ ಜಿಲ್ಲೆ ಸೇರಿ ಏಳು ಜಿಲ್ಲೆಯ 11 ಆಸ್ಪತ್ರೆಯಲ್ಲಿ ಮಾತ್ರ ಆರೋಗ್ಯ ಕರ್ನಾಟಕ ಕಾರ್ಡ್‌ ನೋಂದಣಿ ಹಾಗೂ ವಿತರಣೆ ಮಾಡುತ್ತಿದೆ. ಹೀಗಾಗಿ, ಯೋಜನೆ ಅನುಷ್ಠಾನಗೊಳ್ಳದ 23 ಜಿಲ್ಲೆ ಅದರಲ್ಲೂ ಪ್ರಮುಖವಾಗಿ 18 ಜಿಲ್ಲೆಗಳ ಸಾರ್ವಜನಿಕರಿಗೆ ಆರೋಗ್ಯ ಕಾರ್ಡ್‌ ದೊರಕಿಲ್ಲ.

ಈ ಭಾಗದ ಜನರಿಗೆ ‘ಆರೋಗ್ಯ ಕರ್ನಾಟಕ’ ಕಾರ್ಡ್‌ ಹೊಂದಿಲ್ಲದಿದ್ದರೂ ಬಿಪಿಎಲ್‌ ಹಾಗೂ ಆಧಾರ್‌ ಕಾರ್ಡ್‌ ತೋರಿಸಿ ಆರೋಗ್ಯ ಕರ್ನಾಟಕದಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಲಾಗಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗಳಿಗೆ ರೆಫರ್‌ ಮಾಡುವಾಗ ಆರೋಗ್ಯ ಕರ್ನಾಟಕ ಕಾರ್ಡ್‌ ಇಲ್ಲದಿದ್ದರೆ ತೀವ್ರ ಸಮಸ್ಯೆ ಉಂಟಾಗುತ್ತಿದೆ.

ಜತೆಗೆ ಅಪಘಾತ, ಸುಟ್ಟಗಾಯ ಸೇರಿದಂತೆ 151 ತುರ್ತು ಚಿಕಿತ್ಸೆಗಳಿಗೆ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಇದೆ. ಆದರೆ, ಈ ವೇಳೆಯೂ ಆರೋಗ್ಯ ಕಾರ್ಡ್‌ ಇಲ್ಲದೆ ಕೇವಲ ಬಿಪಿಎಲ್‌ ಕಾರ್ಡ್‌ ತೋರಿಸಿದರೆ ಯಾವ ಖಾಸಗಿ ಆಸ್ಪತ್ರೆಯೂ ಸ್ಪಂದಿಸುತ್ತಿಲ್ಲ. ಹೀಗಾಗಿ ಲಕ್ಷಾಂತರ ಹಣ ಸುರಿಯುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಶಸ್ವಿನಿ ಫಲಾನುಭವಿಗಳು ಅತಂತ್ರ:

ಇದೆಲ್ಲಕ್ಕೂ ಮಿಗಿಲಾಗಿ ಆರೋಗ್ಯ ಕರ್ನಾಟಕ ಅನುಷ್ಠಾನ ವಿಳಂಬದಿಂದಾಗಿ ರಾಜ್ಯದಲ್ಲಿರುವ 43.42 ಲಕ್ಷ ಯಶಸ್ವಿನಿ ಫಲಾನುಭವಿಗಳ ಪೈಕಿ 30 ಲಕ್ಷದಷ್ಟುಜನರಿಗೆ ಆರೋಗ್ಯ ಸೇವೆ ಲಭ್ಯವಾಗದಂತಾಗಿದೆ.

ಪ್ರಸ್ತುತ ರಾಜ್ಯದಲ್ಲಿನ 30 ಜಿಲ್ಲೆಗಳಲ್ಲಿರುವ ಸಹಕಾರಿ ಸಂಘಗಳು, ಸೊಸೈಟಿಗಳು, ಪತ್ರಕರ್ತರ ಸಹಕಾರ ಸಂಘಗಳು, ಸಹಕಾರಿ ಬ್ಯಾಂಕ್‌, ಸ್ತ್ರೀಶಕ್ತಿ ಸಂಘ, ಸಾಂಸ್ಕೃತಿಕ ಸಹಕಾರ ಸೊಸೈಟಿಗಳ 43.42 ಲಕ್ಷ ಮಂದಿ ಯಶಸ್ವಿನಿ ಯೋಜನೆಯ ಫಲಾನುಭವಿಗಳಾಗಿದ್ದರು. ಬಿಪಿಎಲ್‌ ಹಾಗೂ ಎಪಿಎಲ್‌ ತಾರತಮ್ಯವಿಲ್ಲದೆ ಪ್ರತಿಯೊಂದು ಕುಟುಂಬಕ್ಕೆ 2 ಲಕ್ಷ ರು.ವರೆಗೆ ವಾರ್ಷಿಕ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತಿತ್ತು.

ಮೊದಲ ಬಾರಿಗೆ 2003ರಲ್ಲಿ ಶುರುವಾದ ಯೋಜನೆಯಲ್ಲಿ 2003-04ನೇ ಸಾಲಿನಲ್ಲಿಯೇ 16 ಲಕ್ಷ ಸದಸ್ಯರು ನೋಂದಣಿ ಮಾಡಿಕೊಂಡಿದ್ದರು. 2016-17ನೇ ಸಾಲಿಗೆ ಸದಸ್ಯರ ಸಂಖ್ಯೆ 43.42 ಲಕ್ಷದಷ್ಟಾಗಿದೆ. ಇದೀಗ 2018ರ ಜೂನ್‌ 30ಕ್ಕೆ ಯೋಜನೆ ಸ್ಥಗಿತಗೊಳಿಸಲಾಗಿದೆ.

ಇದಕ್ಕೂ ಮೊದಲು 2016-17ನೇ ಸಾಲಿನಲ್ಲಿ ಯೋಜನೆಯಡಿ 2,71,776 ಮಂದಿ ಹೊರ ರೋಗಿಗಳು ಸೇವೆ ಪಡೆದಿದ್ದಾರೆ. ಜತೆಗೆ 1,94,129 ಮಂದಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಹಣದಲ್ಲಿ ಸದಸ್ಯರ ವಿಮಾ ಕಂತಿನಿಂದ 105.32 ಕೋಟಿ ರು. ಹಾಗೂ ಸರ್ಕಾರದಿಂದ 170.43 ಕೋಟಿ ರು. ಭರಿಸಲಾಗಿದೆ.

ಯಶಸ್ವಿನಿ ಯೋಜನೆಯಡಿ ಎಪಿಎಲ್‌ ಹಾಗೂ ಬಿಪಿಎಲ್‌ ಎರಡೂ ಕುಟುಂಬಗಳು ರಾಜ್ಯಾದಂತ ಉಚಿತ ಚಿಕಿತ್ಸಾ ಸೇವೆ ಪಡೆಯುತ್ತಿದ್ದರು. ಆದರೆ, ಆರೋಗ್ಯ ಕರ್ನಾಟಕ ಯೋಜನೆ ರಾಜ್ಯಾದ್ಯಂತ ಅನುಷ್ಠಾನಗೊಳ್ಳುವ ಮೊದಲೇ ಯಶಸ್ವಿನಿ ಯೋಜನೆ ವಿಲೀನಗೊಳಿಸಿ ರದ್ದುಪಡಿಸಲಾಗಿದೆ. ಇದರಿಂದ ರಾಜ್ಯಾದ್ಯಂತ ಆರೋಗ್ಯ ಕರ್ನಾಟಕ ಅನುಷ್ಠಾನಗೊಳ್ಳದ 23 ಜಿಲ್ಲೆಗಳಲ್ಲಿನ 30 ಲಕ್ಷದಷ್ಟುಸದಸ್ಯರು ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ.

ಬಿಪಿಎಲ್‌ ಕಾರ್ಡ್‌ದಾರರಿಗೆ ನೇರವಾಗಿ ಚಿಕಿತ್ಸೆ ಪಡೆಯಲು ಅವಕಾಶವಿದ್ದರೂ ಸಹ ಹಕ್ಕೊತ್ತಾಯ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಆರೋಗ್ಯ ಕರ್ನಾಟಕದಡಿ ಎಪಿಎಲ್‌ ಕಾರ್ಡ್‌ದಾರರಿಗಿದ್ದ ಸೇವೆ ರದ್ದುಪಡಿಸಿದ್ದು, ಶೇ.30 ರಷ್ಟುಚಿಕಿತ್ಸಾ ವೆಚ್ಚ ಮಾತ್ರ ಭರಿಸುವುದಾಗಿ ಹೇಳಿದೆ. ಎಪಿಎಲ್‌ ಕಾರ್ಡ್‌ದಾರರಿಗೆ ಆರೋಗ್ಯ ಕಾರ್ಡ್‌ ದೊರೆಯದೆ ಇರುವುದರಿಂದ ಈ ಸೇವೆಯೂ ಪ್ರಸ್ತುತ ಲಭ್ಯವಾಗುತ್ತಿಲ್ಲ.

ಅನುಷ್ಠಾನದಲ್ಲಿ ವೈಫಲ್ಯ:

ಆರೋಗ್ಯ ಕರ್ನಾಟಕ ಯೋಜನೆ ಘೋಷಿಸಿದಾಗ ಮೊದಲ ಹಂತದಲ್ಲಿ 11 ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್‌ ನೀಡಲಾಗುತ್ತಿದೆ. ಜೂನ್‌ 30ರ ಒಳಗಾಗಿ ರಾಜ್ಯದ ಪ್ರಮುಖ ಹಾಗೂ ಜಿಲ್ಲಾ ಹಂತದ 33 ಆಸ್ಪತ್ರೆಗಳಲ್ಲಿ ಸೇವೆ ಒದಗಿಸಲಾಗುವುದು. ಸೆ.29ರ ಒಳಗಾಗಿ ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್‌ ನೀಡಲಾಗುವುದು. 2019ರ ಫೆಬ್ರುವರಿ ವೇಳೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ವಿತರಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ, ಈವರೆಗೂ 11 ಆಸ್ಪತ್ರೆಗಳಲ್ಲಿ ಬಿಟ್ಟರೆ ಉಳಿದ ಯಾವುದೇ ಆಸ್ಪತ್ರೆಯಲ್ಲೂ ಕಾರ್ಡ್‌ ವಿತರಣೆ ಆಗುತ್ತಿಲ್ಲ.

- ಶ್ರೀಕಾಂತ್ ಎನ್ ಗೌಡಸಂದ್ರ