ಭಾರತೀಯ ಸೇನೆಯ ಮಾನವೀಯತೆಯ ಮುಖಕ್ಕೆ ಸಾಟಿ ಎಲ್ಲಿದೆ?| ಗಡಿಯಾಚೆಯಿಂದ ಹರಿದು ಬಂದ ಬಾಲಕನ ಶವ ಹಸ್ತಾಂತರಿಸಿದ ಭಾರತೀಯ ಸೇನೆ| ಪಾಕ್ ಆಕ್ರಮಿತ ಕಾಶ್ಮೀರದಿಂದ ಹರಿದು ಬಂದ ಏಳು ವರ್ಷದ ಬಾಲಕನ ಶವ| ಕಿಶನ್’ಗಂಗಾ ನದಿಯಲ್ಲಿ ಸಿಕ್ಕ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸೇರಿದ ಬಾಲಕನ ಶವ| ಬಾಲಕನ ಶವ ಹಸ್ತಾಂತರಿಸಲು ಪ್ರೊಟೊಕಾಲ್ ಮುರಿದ ಭಾರತೀಯ ಸೇನೆ|
ಶ್ರೀನಗರ(ಜು.12): ಸೈನಿಕನ ಸಮವಸ್ತ್ರದೊಳಗಿರುವ ಮನುಷ್ಯನನ್ನು ಕಂಡವರು ಅಪರೂಪ. ಸೈನಿಕ ಗಡಿಯಲ್ಲಿ ನಿಂತಿರುವುದೇ ಶತ್ರು ಸಂಹಾರ ಮಾಡಲು ಎಂಬ ಮನೋಭಾವ ಆತನ ಆಂತರ್ಯವನ್ನು ಅರಿಯಲು ನಮಗೆ ಅಡ್ಡಿಯಾಗುತ್ತದೆ.
ವಿಶ್ವದ ಇತರ ಸೇನೆಗಳ ಬಗ್ಗೆಯಂತೂ ಗೊತ್ತಿಲ್ಲ. ಆದರೆ ಭಾರತೀಯ ಸೇನೆಯಂತೂ ಗಡಿಯಲ್ಲಿ ನಿಂತಿರುವುದು ರಕ್ಷಣೆಗೆ ಹೊರತು ರಕ್ತಪಾತಕ್ಕಲ್ಲ. ಇದು ಭಾರತೀಯ ಸೇನೆಯ ಇತಿಹಾಸವನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು.
ಗಡಿಯಾಚೆ ತನ್ನಂತೆಯೇ ಸಮವಸ್ತ್ರ ತೊಟ್ಟು ತನ್ನ ದೇಶ ಕಾಯುತ್ತಿರುವ ಸೈನಿಕನನ್ನೂ ಗೌರವಿಸುವ ಗುಣ ಪ್ರತಿಯೊಬ್ಬ ಭಾರತೀಯ ಸೈನಿಕನ ರಕ್ತದಲ್ಲೂ ಇದೆ. ಅಷ್ಟೇ ಅಲ್ಲ, ಗಡಿಯಾಚೆಗಿನ ಸಾಮಾನ್ಯ ನಾಗರಿಕರ ಕುರಿತು ಚಿಂತಿಸುವ ಮನಸ್ಸು ಭಾರತೀಯ ಸೈನಿಕನದ್ದು.
ಅದರಂತೆ ಪಾಕ್ ಆಕ್ರಮಿತ ಕಾಶ್ಮೀರದ ಕಿಶನ್’ಗಂಗಾ ನದಿಯಿಂದ ಭಾರತದ ಗಡಿ ದಾಟಿ ಹರಿದು ಬಂದ 7 ವರ್ಷದ ಬಾಲಕನ ಶವ ಹಸ್ತಾಂತರಿಸಲು, ಭಾರತೀಯ ಸೇನೆ ಅಂತಾರಾಷ್ಟ್ರೀಯ ಗಡಿ ನಿಯಮವನ್ನು ಮೀರಿದೆ.
ಹೌದು, ಪಾಕ್ ಆಕ್ರಮಿತ ಕಾಶ್ಮೀರದ ಗುರೆಜ್ ಗ್ರಾಮದ ಅಚೂರಾ ಸಿಂಧಿಯಾಲ್ ಪ್ರದೇಶದ ಆದಿಲ್ ಅಬ್ದುಲ್ ಶೇಖ್ ಎಂಬ 7 ವರ್ಷದ ಬಾಲಕ, ಕಿಶನ್’ಗಂಗಾ ನದಿಯಲ್ಲಿ ಮೀನು ಹಿಡಯುವಾಗ ಜಾರಿ ಬಿದ್ದು ಮೃತನಾಗಿದ್ದ. ಅಬ್ದುಲ್ ಶವ ಪಾಕ್ ಗಡಿ ದಾಟಿ ಭಾರತದೊಳಕ್ಕೆ ಹರಿದು ಬಂದಿತ್ತು.
ಬಾಲಕನ ಶವ ಗುರುತಿಸಿದ ಭಾರತೀಯ ಸೈನಿಕರು, ಈ ಕುರಿತು ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳು ಪಾಕಿಸ್ತಾನ ಸೇನಾಧಿಕಾರಿಗಳೊಂದಿಗೆ ಮಾತನಾಡಿ, ಬಾಲಕನ ಶವವನ್ನು ಪಾಕ್ ಸೈನ್ಯಕ್ಕೆ ಹಸ್ತಾಂತರಿಸಿದ್ದಾರೆ.
ತಮ್ಮ ಮಗನ ಶವ ಹಸ್ತಾಂತರಿಸುವಂತೆ ಮೃತ ಬಾಲಕನ ತಂದೆ ಭಾರತೀಯ ಸೇನೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಬಾಲಕನ ಶವವನ್ನು ಖುದ್ದು ಹೊತ್ತು ತಂದ ಸೈನಿಕರು, ಶವವನ್ನು ಪಾಕ್ ಸೈನ್ಯದ ಸುಪರ್ದಿಗೆ ಒಪ್ಪಿಸಿದ್ದಾರೆ.
