ವಾಷಿಂಗ್ಟನ್‌: ಕರ್ತವ್ಯದಲ್ಲಿದ್ದಾಗಲೇ ಅಪರಿಚಿತ ಮಗುವೊಂದಕ್ಕೆ ಹಾಲುಣಿಸಿ ಬೆಂಗಳೂರಿನ ಮಹಿಳಾ ಪೊಲೀಸ್‌ ಕಾನ್ಸ್‌ಟೇಬಲ್‌ ಅರ್ಚನಾ ಇತ್ತೀಚೆಗೆ ಸುದ್ದಿಯಾಗಿದ್ದರು. ಇದೇ ಮಾದರಿಯಲ್ಲಿ ಇದೀಗ ಅರ್ಜೆಂಟೀನಾದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್‌ ಸಿಬ್ಬಂದಿಯೊಬ್ಬರು, ತಾಯಿಯಿಂದ ಬೇರೆಯಾಗಿದ್ದ ಅಳುತ್ತಿದ್ದ ಮಗುವಿಗೆ ಹಾಲುಣಿಸಿ ಜಗತ್ತಿನಾದ್ಯಂತ ಮೆಚ್ಚುಗೆ ಪಡೆದಿದ್ದಾರೆ.

ಅಲ್ಲದೆ, ತಮ್ಮ ಇಲಾಖೆಯಲ್ಲಿ ಇದೀಗ ಅವರು ಅಧಿಕಾರಿ ದರ್ಜೆಗೆ ಭಡ್ತಿಯನ್ನೂ ಪಡೆದಿದ್ದಾರೆ. ಅರ್ಜೆಂಟೀನಾದ ಬೆರ್ರಿಸೊ ಪ್ರದೇಶದಲ್ಲಿನ ಆಸ್ಪತ್ರೆಯೊಂದಕ್ಕೆ ಕರ್ತವ್ಯ ನಿಮಿತ್ತ ತೆರಳಿದ್ದ ಸೆಲೆಸ್ಟ್‌ ಜಾಕ್ಲಿನ್‌ ಅಯಾಲಾ, ಮಗುವೊಂದು ಅಳುತ್ತಿರುವುದನ್ನು ಕೇಳಿಸಿಕೊಂಡು, ಮಗುವಿಗೆ ಹಸಿವಾಗುತ್ತಿದೆ ಎಂಬುದನ್ನು ಅರಿತು ಅದಕ್ಕೆ ಹಾಲುಣಿಸಿದ್ದರು.

ಇತ್ತೀಚೆಗಷ್ಟೇ ತಾಯಿಯಾಗಿದ್ದ ಅಯಾಲಾ ಹಾಲುಣಿಸುತ್ತಿದ್ದ ಫೋಟೊ ತೆಗೆದು ಸಹೋದ್ಯೋಗಿಗಳು ಫೇಸ್‌ಬುಕ್‌ಗೆ ಹಾಕಿದ್ದರು. ಈ ಫೋಟೊ 1,12,000ಕ್ಕೂ ಹೆಚ್ಚು ಬಾರಿ ಶೇರ್‌ ಆಗಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.