ಐದಾರು ಕಾರ್ಮಿಕರು ದಿನಪೂರ್ತಿ ಮಾಡುವ ಕೆಲಸವನ್ನು ಈ ಯಂತ್ರ ಕೆಲವೇ ನಿಮಿಷಗಳಲ್ಲಿ ಪೂರೈಸುತ್ತದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಶಿವಗಂಗಾ ಆಗ್ರೋ ಇಂಡಸ್ಟ್ರೀಸ್ ಸುಲಭವಾಗಿ ಅಡಕೆ ಸುಲಿಯುವ ಈ ಯಂತ್ರವನ್ನು ಆವಿಷ್ಕರಿಸಿದೆ.
ಬೆಂಗಳೂರು (ನ.20) : ಒಂದು ಚಹಾ ಸೇವಿಸುವ ಅವಧಿಯಲ್ಲಿ 25 ಕೆ.ಜಿ. ಅಡಕೆ ಸಿಪ್ಪೆ ಸುಲಿಯಬಹುದು! ಆಶ್ಚರ್ಯವಾದರೂ ಇದು ಸತ್ಯ. ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿ ಮೇಳದಲ್ಲಿ ಈ ಅಡಕೆ ಸುಲಿಯುವ ಯಂತ್ರ ಸಾರ್ವಜನಿಕರ ಗಮನ ಸೆಳೆಯಿತು. ಅಡಕೆ ಬಿಡಿಸಲು ಕಾರ್ಮಿಕರು ಸಿಗುವುದಿಲ್ಲ ಎಂದು ಕೊರಗುವ ರೈತರು, ಈ ಯಂತ್ರದ ಉಪಯೋಗ ಪಡೆಯಬಹುದು.
ಐದಾರು ಕಾರ್ಮಿಕರು ದಿನಪೂರ್ತಿ ಮಾಡುವ ಕೆಲಸವನ್ನು ಈ ಯಂತ್ರ ಕೆಲವೇ ನಿಮಿಷಗಳಲ್ಲಿ ಪೂರೈಸುತ್ತದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಶಿವಗಂಗಾ ಆಗ್ರೋ ಇಂಡಸ್ಟ್ರೀಸ್ ಸುಲಭವಾಗಿ ಅಡಕೆ ಸುಲಿಯುವ ಈ ಯಂತ್ರವನ್ನು ಆವಿಷ್ಕರಿಸಿದೆ. ಮೇಳದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಈ ಯಂತ್ರವನ್ನು ಅಡಿಕೆ ಬೆಳೆಗಾರರು ಕುತೂಹಲದಿಂದ ವೀಕ್ಷಿಸಿದರು. ಕೆಲವರು ಯಂತ್ರವು ಅಡಿಕೆ ಸಿಪ್ಪೆ ಸುಲಿಯುವ ಪ್ರಾತ್ಯಕ್ಷಿಕೆ ಕಂಡು ಬೆರಗಾದರು. ಹಸಿ ಅಡಕೆ ಮತ್ತು ಒಣ ಅಡಕೆ ಸುಲಿಯಲು ಪ್ರತ್ಯೇಕ ಯಂತ್ರಗಳನ್ನು ಅಭಿವೃದ್ಧಿ ಪಡಿಸಲಾಗಿದೆ.
ಎರಡೂ ಯಂತ್ರಗಳು ೨ ಎಚ್‌ಪಿ ಮೋಟಾರ್ ಒಳಗೊಂಡಿವೆ. ಆದರೆ, ವಿನ್ಯಾಸ ಭಿನ್ನವಾಗಿದೆ. ಒಣ ಅಡಕೆ ಸುಲಿಯುವ ಯಂತ್ರಕ್ಕೆ ೫೫ ಸಾವಿರ ರು. ಹಾಗೂ ಹಸಿ ಅಡಕೆ ಸುಲಿಯುವ ಯಂತ್ರಕ್ಕೆ 75 ಸಾವಿರ ರು. ನಿಗದಿ ಮಾಡಲಾಗಿದೆ. ಈ ಯಂತ್ರಗಳ ಬಳಕೆಯಿಂದ ಕಾರ್ಮಿಕರ ಕೊರತೆ ನೀಗಲಿದೆ. ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಬಹುದು. ಒಬ್ಬ ವ್ಯಕ್ತಿ ಸುಲಭವಾಗಿ ನಿರ್ವಹಿಸುವ ಹಾಗೆ ಯಂತ್ರಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಶಿವಗಂಗಾ ಆಗ್ರೋ ಇಂಡಸ್ಟ್ರೀಸ್‌ನ ಪ್ರತಿನಿಧಿ ಎ.ಈ.ರಾಜು ವಿವರಿಸಿದರು.
ನಮ್ಮ ಬಳಿ ಸುಲಿಯುವ ಯಂತ್ರಗಳ ಜೊತೆಗೆ ಟ್ರಾಕ್ಟರ್ ಟ್ರಾಲಿಗಳು, ಕಲ್ಟಿವೇಟರ್, ಧಾನ್ಯ ಸ್ವಚ್ಛ ಮಾಡುವ ಯಂತ್ರಗಳು, ಕೃಷಿ ಸಾಮಗ್ರಿಗಳನ್ನು ಸಾಗಾಣೆ ಮಾಡುವ ಎರಡು ಚಕ್ರ ಗಾಡಿ ಸೇರಿದಂತೆ ಹಲವು ವಿಧದ ಯಂತ್ರಗಳಿವೆ. ರೈತರ ಕೈಗೆಟಕುವ ದರ ನಿಗದಿ ಮಾಡಲಾಗಿದೆ. ಕೆಲವು ಯಂತ್ರಗಳಿಗೆ ಸಹಾಧನದ ಸೌಲಭ್ಯವೂ ಇದೆ ಎಂದು ಹೇಳಿದರು.
ಬಹು ಬೆಳೆಗಳ ಕಟಾವು ಯಂತ್ರ: ಮೇಳದಲ್ಲಿ ರೈತರನ್ನು ಹೆಚ್ಚು ಆಕರ್ಷಿಸಿದ ಯಂತ್ರಗಳ ಪೈಕಿ ಕಟಾವು ಯಂತ್ರವೂ ಒಂದು. ತುಮಕೂರಿನ ಎಸ್ ಎಚ್‌ಎಪಿ ಎಂಜಿನ್ ಮೋಟಾರ್ ಕಂಪನಿ ಅಭಿವೃದ್ಧಿಪಡಿಸಿರುವ ಈ ಯಂತ್ರದಲ್ಲಿ ಜೋಳದ ಕಡ್ಡಿ, ರಾಗಿ ಹುಲ್ಲು, ಭತ್ತದ ಹುಲ್ಲು, ತೆಂಗಿನ ಗರಿಗಳನ್ನು ಕ್ಷಣ ಮಾತ್ರದಲ್ಲಿ ಕತ್ತರಿಸಬಹುದು.
ಜಾನುವಾರುಗಳಿಗೆ ಅಗತ್ಯಕ್ಕೆ ತಕ್ಕಂತೆ ಒಣ ಅಥವಾ ಹಸಿ ಮೇವನ್ನು ತುಂಡರಿಸಬಹುದು. ಇದೇ ಮಾದರಿಯ ಮತ್ತೊಂದು ಯಂತ್ರ ಕ್ಷಣ ಮಾತ್ರದಲ್ಲಿ ತೆಂಗಿನ ಗರಿಗಳನ್ನು ಪುಡಿ ಮಾಡುತ್ತದೆ. ಈ ಯಂತ್ರಗಳಿಗೆ 66 ಸಾವಿರ ರು. ನಿಗದಿ ಮಾಡಿದ್ದು, ಖರೀದಿದಾರರಿಗೆ ಸರ್ಕಾರಿಂದ 36 ಸಾವಿರ ಸಹಾಯಧನವೂ ಸಿಗಲಿದೆ ಎಂದು ಕಂಪನಿಯ ಪ್ರತಿನಿಧಿ ಶಿವಕುಮಾರ್ ತಿಳಿಸಿದರು.
ವರದಿ : ಮೋಹನ್ ಹಂಡ್ರಂಗಿ ಬೆಂಗಳೂರು - ಕನ್ನಡಪ್ರಭ
