ಸ್ಟಾರ್​​ಗಳಾಯ್ತು, ಈಗ ಖಾಕಿಧಾರಿಗಳಿಂದಲೂ ರಾಜಕೀಯ ಪ್ರವೇಶಕ್ಕೆ ಸಿದ್ಧತೆ ನಡೆದಿದೆ. ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಪಾಲಿಟಿಕ್ಸ್​ಗೆ ಎಂಟ್ರಿ ಆಗೋದು ಖಚಿತವಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್​​​​ ಜೊತೆ ಅನುಪಮಾ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

ಉಡುಪಿ(ಅ.03): ಸ್ಟಾರ್​​ಗಳಾಯ್ತು, ಈಗ ಖಾಕಿಧಾರಿಗಳಿಂದಲೂ ರಾಜಕೀಯ ಪ್ರವೇಶಕ್ಕೆ ಸಿದ್ಧತೆ ನಡೆದಿದೆ. ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಪಾಲಿಟಿಕ್ಸ್​ಗೆ ಎಂಟ್ರಿ ಆಗೋದು ಖಚಿತವಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್​​​​ ಜೊತೆ ಅನುಪಮಾ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

ಹೊಸ ಪಕ್ಷ ಆರಂಭಿಸಲು ಅನುಪಮಾ ಶೆಣೈ ಸಮಾನ ಮನಸ್ಕರೊಂದಿಗೆ ಮಾತುಕತೆ ನಡೆಸಿದ್ದು, ನವೆಂಬರ್ ತಿಂಗಳಲ್ಲಿ ಹೊಸ ಪಕ್ಷ ಘೋಷಣೆ ಸಾಧ್ಯತೆ ಆಗುವ ಸಾಧ್ಯತೆ ಇದೆ. ಈ ವಿಚಾರವಾಗಿ ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿರುವ ಅನುಪಮಾ ಶೆಣೈ 'ನಾನು ಎಲ್ಲಾ ವಿಧಗಳನ್ನೂ ಪ್ರಯತ್ನಿಸಿದೆ. ಬೇರೆ ಬೇರೆ ರಾಜಕಾರಣಿಗಳ ಮೂಲಕ ನನ್ನ ಧ್ಯೇಯ ಹಾಗೂ ಉದ್ದೇಶಗಳನ್ನು ಅವರ ಪಕ್ಷಗಳು ಮುಂದುವರೆಸಿಕೊಂಡು ಹೋಗಲಿ ಎಂಬ ನಿಟ್ಟಿನಲ್ಲಿ ಹಲವರನ್ನು ಸಂಪರ್ಕಿಸಿದೆ. ಆದರೆ ಎಲ್ಲರೂ ಒಂದೇ ರೀತಿ ಅಂತನಿಸಿತು. ಯಾವುದೇ ಪಕ್ಷಗಳಲ್ಲಿ ಯಾವುದೇ ಸಿದ್ಧಾಂತಗಳಿಲ್ಲ, ಪಕ್ಷದ ಸಂವಿಧಾನ ಉತ್ತಮ ಸಿದ್ಧಾಂತಗಳಿವೆ ಆದರೆ ಯಾರೂ ಅದನ್ನು ಪಾಲಿಸುತ್ತಿಲ್ಲ. ಹೀಗಾಗಿ ರಾಜಕೀಯದಲ್ಲಿ ಹೊಸ ಅಲೆ ಬರುವ ಅಗತ್ಯವಿದೆ ಹೀಗಾಗಿ ರಾಜಕೀಯಕ್ಕೆ ಪ್ರವೇಶ ಮಾಡುವ ನಿರ್ಧಾರ ಮಾಡಿದ್ದೇನೆ. ಈ ಮೊದಲಿದ್ದ ಪೊಲೀಸ್ ಇಲಾಖೆಯಲ್ಲಿ ಚಿಕ್ಕ ಪುಟ್ಟ ಕಳ್ಳತನಗಳಿಗೆ ಬ್ರೇಕ್ ಹಾಕಲು ಮಾತ್ರ ಗೊತ್ತಿತ್ತು. ಆದರೆ ರಾಜಕೀಯಕ್ಕೆ ಎಂಟ್ರಿ ಕೊಟ್ಟರೆ ಇದಕ್ಕೂ ಉತ್ತಮವಾಗಿ ಕೆಲಸ ಮಾಡಬಹುದು. ನನಗೀಗ ಕೇವಲ ಪೊಲೀಸ್ ಇಲಾಖೆಯ ಕೆಲಸ ಗೊತ್ತಿದೆ ಅದೇ ಸಿದ್ಧಾಂತವನ್ನೂ ಇಲ್ಲೂ ಬಳಸುತ್ತೇನೆ' ಎಂದು ಹೇಳಿದ್ದಾರೆ.

ಇನ್ನು ಬಿಜೆಪಿಗೆ ಸೇರುವ ಕುರಿತಾಗಿ ಮಾತನಾಡಿದ ಮಾಜಿ ಡಿವೈಎಸ್'ಪಿ 'ಬಿಜೆಪಿಗೆ ಸೇರುವ ವದಂತಿಯನ್ನು ಅವರೇ ಹಬ್ಬಿಸಿದ್ದರು ವಿನಃ ನಾನು ಯಾವತ್ತೂ ಅವರ ಬಳಿ ಪಕ್ಷಕ್ಕೆ ಸೇರಿಸಿ ಎಂದು ಭೇಟಿಯಾಗಿಲ್ಲ. ಆದರೆ ಸಂಸದರಾಗಿದ್ದ ಯಡಿಯೂರಪ್ಪರನ್ನು, ರಾಜನಾಥ್ ಸಿಂಗ್'ರನ್ನು ಭೇಟಿಯಾಗಿದ್ದೆ ಇದು ಕೇವಲ ಕರ್ನಾಟಕದ ಸರ್ಕಾರಿ ಉದ್ಯೋಗಿಗಳ ಮೇಲಿನ ದೌರ್ಜನ್ಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಮತ್ತು ಸಂಸತ್ತಿನಲ್ಲಿ ಮಂಡಿಸಿ ಎಂದು ಮನವಿ ಮಾಡಲು ಭೇಟಿಯಾಗಿದ್ದೆ. ಇದನ್ನೇ ಬಿಜೆಪಿಗೆ ಸೇರುತ್ತೇನೆಂದು ಬಿಂಬಿಸಿದ್ದಾರಷ್ಟೇ. ರಾಜನಾಥ್ ಸಿಂಗ್'ರನ್ನು ಭೇಟಿಯಾಗಲು ಕಾರಣ ಅವರು ಗೃಹ ಮಂತ್ರಿಯಾಗಿದ್ದುದು. ನಮ್ಮ ಇಲಾಖೆ ಗೃಹಖಾತೆಗೆ ಸೇರುತ್ತದೆ. ಹೀಗಾಗಿ ಪೊಲೀಸ್ ಇಲಾಖೆಯಲ್ಲಿದ್ದ ಸಮಸ್ಯೆಗಳನ್ನು ಅವರಿಗೆ ತಿಳಿಸಲು ಭೇಟಿಯಾಗಿದ್ದೆ' ಎಂದಿದ್ದಾರೆ.

ಪಕ್ಷದ ಬಗ್ಗೆ ಮಾತನಾಡಿರುವ ಅನುಪಮಾ ಶೆಣೈರವರು 'ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೀಗೆ ಎಲ್ಲಾ ಪಕ್ಷಗಳನ್ನು ನಾನು ಗಮನಿಸಿದ್ದೇನೆ. ಪಕ್ಷಗಳು ಒಳ್ಳೆಯ ಉದ್ದೇಶದಿಂದಲೇ ಹುಟ್ಟಿಕೊಳ್ಳುತ್ತದೆ. ಇನ್ನು ಈಗಾಗಲೇ ಹುಟ್ಟಿಕೊಂಡಿರುವ ಉಪೇಂದ್ರರವರ ಪ್ರಜಾಕೀಯ ಪಕ್ಷದ ಹಾಗೂ ನನ್ನ ನಿಲುವುಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ನನಗೆ ಎಲ್ಲಕ್ಕೂ ಹೆಚ್ಚು ಇಷ್ಟವಾದ ರಾಜಕಾರಣಿ ಎಂದರೆ ಅರವೊಇಂದ ಕೇಜ್ರಿವಾಲ್'ರವರು. ಆಮ್ ಆದ್ಮಿ ಪಕ್ಷದ ಉದ್ದೇಶ ಚೆನ್ನಾಗಿರಬಹುದು ಆದರೆ ಹಿಂದಿಯ ವಿಷಯದಿಂದಾಗಿ ಸೇರಲು ಸಾಧ್ಯವಿಲ್ಲ. ಜನಸಾಮಾನ್ಯರಿಗೂ ಕೇಜ್ರಿವಾಲ್ ಗೊತ್ತಿಲ್ಲ. ಆದರೆ ಕೊಪ್ಪಳ, ಬೀದರ್ ಹೀಗೆ ಹೈದರಾಬಾದ್ ಕರ್ನಾಟಕದ ಜನರಿಗೆ ನಾನು ಯಾರೆಂದು ಗೊತ್ತು. ಕರಾವಳಿ ಕರ್ನಾಟಕದ ಜನರಿಗೂ ನನ್ನ ಪರಿಚಯ ಇದೆ. ಹೀಗಾಗಿ ಕೇಜ್ರಿವಾಲ್ ಹೆಸರಿಟ್ಟುಕೊಂಡು ಹೋಗುವ ಬದಲು ನಾನು ನ್ನದೇ ಹೆಸರಿಟ್ಟುಕೊಂಡು ಮುಂದುವರೆಯುತ್ತೇನೆ. ಅಲ್ಲದೇ ನಾನು ಸ್ಥಾಪಿಸುವ ಪಕ್ಷ ಕೆಲ ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದ ಪಕ್ಷವಾಗಬೇಕೆಂಬುವುದು ನನ್ನ ಕನಸು' ಎಂದಿದ್ದಾರೆ.

ಅಲ್ಲದೇ 'ಜನಾಭಿಪ್ರಾಯನ್ನು ಸಂಗ್ರಹವಾಗಬೇಕಷ್ಟೇ, ತಂತ್ರಗಾರಿಕೆ ಇನ್ನು ಮುಂದೆ ಆಗಬೇಕು. ಪಕ್ಷವನ್ನು ಇನ್ನು ಬರುವ ಸ್ಪಂದನೆಯನ್ನು ನೋಡಿ ನವೆಂಬರ್ ತಿಂಗಳಲ್ಲಿ ಘೋಷಿಸುತ್ತೇವೆ. ಎಂದಿದ್ದಾರೆ.