ಪುಣೆಯ ಪ್ರತಿಷ್ಟಿತ Film & Television Institute of India (FTII) ಮುಖ್ಯಸ್ಥ ಸ್ಥಾನಕ್ಕೆ ಅನುಪಮ್ ಖೇರ್ ರಾಜೀನಾಮೆ ಪತ್ರದ ಮೂಲಕ ಕೇಂದ್ರ ಸಚಿವ ರಾಥೋಡ್‌ಗೆ ನಿರ್ಧಾರ ತಿಳಿಸಿದ ಬಾಲಿವುಡ್ ಹಿರಿಯ ನಟ
ಪುಣೆ: ಪುಣೆಯ ಪ್ರತಿಷ್ಠಿತ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (FTII ) ಮುಖ್ಯಸ್ಥ ಸ್ಥಾನಕ್ಕೆ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಬುಧವಾರ ರಾಜೀನಾಮೆ ನೀಡಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್‌ಗೆ ಬರೆದಿರುವ ಪತ್ರದಲ್ಲಿ ಖೇರ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಅಂತರಾಷ್ಟ್ರೀಯ ಶೋವೊಂದರಲ್ಲಿ ಭಾಗವಹಿಸಲು ಅಮೆರಿಕಾಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತಳೆಯಲಾಗಿದೆ ಎಂದಿರುವ ಖೇರ್, ಮುಂದಿನ 9 ತಿಂಗಳುಗಳ ಕಾಲ ಅಲ್ಲಿಯೇ ಉಳಿಯಲಿದ್ದಾರೆ.
ಎಫ್‌ಟಿಐಐಗೆ ಮುಖ್ಯಸ್ಥನಾಗಿ ನೇಮಿಸುವ ಸಂದರ್ಭದಲ್ಲೇ ಆಗಿನ ಮಂತ್ರಿ ಸ್ಮೃತಿ ಇರಾನಿಯವರಿಗೆ ಈ ವಿಚಾರ ತಿಳಿಸಿದ್ದೆ ಎಂದು ಅವರು ಹೇಳಿದ್ದಾರೆ.
ಟ್ವಿಟರ್‌ನಲ್ಲೂ ತನ್ನ ನಿರ್ಧಾರವನ್ನು ಪ್ರಕಟಿಸಿರುವ ಹಿರಿಯ ನಟ, ಪ್ರತಿಷ್ಟಿತ ಸಂಸ್ಥೆಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನನಗೆ ಗೌರವದ ವಿಷಯ. ಇಲ್ಲಿ ಬಹಳಷ್ಟು ವಿಚಾರಗಳನ್ನು ನಾನು ಕಲಿತಿದ್ದೇನೆ. ಆದರೆ, ಹೊರದೇಶದಲ್ಲಿ ಕೈಹಾಕಿರುವ ಕೆಲಸದ ಒತ್ತಡದಿಂದಾಗಿ, ಈ ಸಂಸ್ಥೆಗಾಗಿ ಹೆಚ್ಚು ಸಮಯ ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಈ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆಂದು, ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಸಂಸ್ಥೆಯ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದಕ್ಕೂ ಧನ್ಯವಾದ ಸಲ್ಲಿಸಿರುವ ಖೇರ್, ತನ್ನ ಆಡಳಿತಾವಧಿಯಲ್ಲಿ ಸಮರ್ಥವಾದ ಗವರ್ನಿಂಗ್ ಬಾಡಿಯನ್ನು ರಚಿಸಿದ್ದೇವೆ. ಅದು ನಿಮ್ಮ ಮಾರ್ಗದರ್ಶನಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ.
