ಕರ್ನಾಟಕ ಕೇಡರ್‌'ನ ಐಎಎಸ್‍ ಅಧಿಕಾರಿ ಅನುರಾಗ್‍ ತಿವಾರಿ ಸಾವು ಸಹಜವಲ್ಲ, ಹತ್ಯೆ ಎಂದು ರಾಜ್ಯ ಸರ್ಕಾರದ ಮೇಲೆ ತಿವಾರಿ ಕುಟುಂಬ ಆರೋಪಿಸಿತ್ತು. ಆದರೆ ಇದನ್ನು ರಾಜ್ಯ ಸರ್ಕಾರ ಇದನ್ನ ತಳಿ ಹಾಕಿತ್ತು. ಆದರೆ ಈ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ.
ಬೆಂಗಳೂರು(ಮೇ.19): ಕರ್ನಾಟಕ ಕೇಡರ್'ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ಸಹಜವಲ್ಲ, ಹತ್ಯೆ ಎಂದು ರಾಜ್ಯ ಸರ್ಕಾರದ ಮೇಲೆ ತಿವಾರಿ ಕುಟುಂಬ ಆರೋಪಿಸಿತ್ತು. ಆದರೆ ಇದನ್ನು ರಾಜ್ಯ ಸರ್ಕಾರ ಇದನ್ನ ತಳಿ ಹಾಕಿತ್ತು. ಆದರೆ ಈ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ.
ಕೊಲೆಯಾದರಾ ತಿವಾರಿ?
ನಿನ್ನೆ ಉತ್ತರಪ್ರದೇಶದ ವಿಧಾನಸಭೆ ಕಲಾಪದಲ್ಲಿ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಕುರಿತಂತೆ ಚರ್ಚೆ ನಡೆದಿದೆ. ಲಖನೌನ ನಡುರಸ್ತೆಯಲ್ಲಿ ಐಎಎಸ್ ಅಧಿಕಾರಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗುತ್ತಾನೆ ಎಂದರೆ ರಾಜ್ಯದ ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ಬಂದಿದೆ ಎಂದು ಎಸ್ಪಿ ಮುಖಂಡ ಹಾಗೂ ವಿಪಕ್ಷ ನಾಯಕ ರಾಮ್ ಗೋವಿಂದ್ ಚೌಧರಿ ಆರೋಪಿಸಿದರು. ಈ ವೇಳೆ ಯು.ಪಿಯ ಕಾನೂನು ಸಂಸದೀಯ ಖಾತೆ ಸಚಿವ ಸುರೇಶ್ ಖನ್ನಾ ಸದನದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧವೇ ಬಾಂಬ್ ಸಿಡಿಸಿದ್ದಾರೆ.
ಸಾವಿನ ಹಿಂದಿದೆ 2 ಸಾವಿರ ಕೋಟಿ ಹಗರಣದ ವಾಸನೆ
ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಉತ್ತರಪ್ರದೇಶದಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವು ನಿಗೂಢವಾಗಿದ್ದರೂ, ಇದೀಗ ಸಾವಿನ ಹಿಂದೆ 2 ಸಾವಿರ ಕೋಟಿ ಹಗರಣದ ವಾಸನೆ ಬರುತ್ತಿದೆ. ಇದಕ್ಕೆ ಪುಷ್ಠಿ ನೀಡಿದ್ದು ಯು.ಪಿ. ಎಸೆಂಬ್ಲಿಯಲ್ಲಿ ಸಚಿವ ಸುರೇಶ್ ಖನ್ನಾ ಸಿಡಿಸಿದ ಬಾಂಬ್. ಎಸ್ಪಿ ಹಾಗೂ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸುರೇಶ್ ಖನ್ನಾ, ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ನಡೆದಿರುವ ಬಹುಕೋಟಿ ಹಗರಣವೊಂದು ತಿವಾರಿ ಸಾವಿನ ಹಿಂದಿದೆ ಎಂದು ಕುಟುಂಬ ಆರೋಪಿಸಿದೆ ಎಂದಿದ್ದಾರೆ.
ಇನ್ನು, ತಮ್ಮ ಮಗನ ಸಾವಿನ ಕುರಿತಂತೆ ಕುಟುಂಬ ವರ್ಗವೂ ಕರ್ನಾಟಕ ಸರ್ಕಾರದ ವಿರುದ್ಧ ಆರೋಪ ಮಾಡಿತ್ತು. ಆಹಾರ ಮತ್ತು ನಾಗರೀಕ ಇಲಾಖೆಯಲ್ಲಿ ಬಹುಕೋಟಿ ಹಗರಣವೊಂದನ್ನ ಬಯಲಿಗೆಳೆಯಲು ಅನುರಾಗ್ ತಿವಾರಿ ತಯಾರಿ ನಡೆಸಿದ್ದರು. ಈ ಹಿನ್ನೆಲೆ, ಸಂಚು ರೂಪಿಸಿ ತಿವಾರಿಯವರನ್ನ ಕೊಲೆ ಮಾಡಲಾಗಿದೆ ಎಂದು ತಂದೆ ಹಾಗೂ ತಮ್ಮ ಆರೋಪಿಸಿದ್ದರು.
ಇಲ್ಲಿ ತುಂಬಾ ಭ್ರಷ್ಟ ಅಧಿಕಾರಿಗಳು ಇದ್ದಾರೆ. ಭ್ರಷ್ಟ ಅಧಿಕಾರಿಗಳಿಗೆ ಇವನನ್ನು ಕಂಡರೆ ಆಗುತ್ತಿರಲಿಲ್ಲ. ಆ ಅಧಿಕಾರಿಗಳು ಇವರ ಪ್ರಾಮಾಣಿಕತೆಯನ್ನು ಸಹಿಸುತ್ತಿರಲಿಲ್ಲ. ಇಲ್ಲಿನ ಅಧಿಕಾರಿಗಳು ತುಂಬಾ ಕೆಟ್ಟವರಾಗಿದ್ದು ಅವರೇ ಯಾವುದೋ ಕಾರಣಕ್ಕೆ ತಿವಾರಿಯನ್ನು ಇವರನ್ನು ಕೊಲೆ ಮಾಡಿಸಿದ್ದಾರೆ.
- ಬಿ.ಎನ್.ತಿವಾರಿ, ಅನುರಾಗ್ ತಿವಾರಿ ತಂದೆ
ಇಲ್ಲಿನ ಅಧಿಕಾರಿಗಳ ಮೇಲೆ ನಮಗೆ ನಂಬಿಕೆಯಿಲ್ಲ. ಪ್ರಕರಣ ಗಂಭೀರವಾಗಿದ್ದು ಪ್ರಕರಣ ಬೇರೆ ತಿರುವು ಪಡೆದುಕೊಳ್ಳಬಹುದು. ಹೀಗಾಗಿ ಅನುರಾಗ್ ತಿವಾರಿ ಅವರ ಸಾವಿನ ಕುರಿತು ಸಿಬಿಐ ತನಿಖೆ ನಡೆಯಲೇಬೇಕು. ಈ ಪ್ರಕರಣ ತುಂಬಾ ಆಸಕ್ತಿದಾಯಕವಾಗಿದೆ. ಇದು ಲಕ್ನೋದ ಸಾಮಾನ್ಯ ಪ್ರಕರಣವಲ್ಲ. ಲಕ್ನೋ ಹಾಗೂ ಕರ್ನಾಟಕದ ನಡುವಿನ ಪ್ರಕರಣವಾಗಿದೆ.
- ಅಲೋಕ್ ತಿವಾರಿ, ಅನುರಾಗ್ ತಿವಾರಿ ಸಹೋದರ
ಲಖನೌ ಎಸ್ ಎಸ್ ಪಿ ದೀಪಕ್ ಕುಮಾರ್, 6 ಜನರ ತಂಡ ರಚಿಸಿ ಸಾವಿನ ತನಿಖೆಗೆ ಆದೇಶಿಸಿದ್ದಾರೆ. ಏತನ್ಮಧ್ಯೆ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಕುರಿತಂತೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ಉತ್ತರಪ್ರದೇಶ ಸಿಎಂಗೆ ಪತ್ರ ಬರೆದು, ಸಾವಿನ ಸಂಪೂರ್ಣ ತನಿಖೆಗೆ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ, ರಾಜ್ಯದ ಐಎಎಸ್ ಅಧಿಕಾರಿಯೊಬ್ಬರು ಉತ್ತರಪ್ರದೇಶದಲ್ಲಿ ಸಾವಿಗೀಡಾಗಿರುವುದು ಹಲವು ಅನುಮಾನಗಳನ್ನ ಹುಟ್ಟಿಸಿರುವುದಂತೂ ಸತ್ಯ. ಇದೀಗ, ಕುಟುಂಬ ಸದಸ್ಯರು ಹಾಗೂ ಯು.ಪಿ. ಬಿಜೆಪಿ ಸಚಿವರ ಆರೋಪದ ಹಿಂದಿನ ರಹಸ್ಯ ಏನು ಎಂಬುದು ಬಯಲಾಗಬೇಕಿದೆ.
