ಶ್ರೀ ಗುರು ಕೊಟ್ಟೂರೇಶ್ವರ ಜಾತ್ರೆ ರಥೋತ್ಸವ ವೇಳೆ ಮುಗುಚಿಬಿದ್ದ ರಥದ ಘಟನೆ ಮಾಸುವ ಮುನ್ನವೇ ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಅದು ಶ್ರೀ ದೊಡ್ಡಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆದಿರುವುದು. ಲಕ್ಷಕ್ಕೂ ಹೆಚ್ಚು ಭಕ್ತರು ಜಮಾಯಿಸಿದ್ದ ಕುರುಗೋಡಿನ ಜಾತ್ರೆಯಲ್ಲಿ ಚಕ್ರಕ್ಕೆ ಸಿಲುಕಿ ಯುವಕ ಸಾವಿಗೀಡಾಗಿದ್ದಾನೆ.
ಬಳ್ಳಾರಿ(ಮಾ.13): ಶ್ರೀ ಗುರು ಕೊಟ್ಟೂರೇಶ್ವರ ಜಾತ್ರೆ ರಥೋತ್ಸವ ವೇಳೆ ಮುಗುಚಿಬಿದ್ದ ರಥದ ಘಟನೆ ಮಾಸುವ ಮುನ್ನವೇ ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಅದು ಶ್ರೀ ದೊಡ್ಡಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆದಿರುವುದು. ಲಕ್ಷಕ್ಕೂ ಹೆಚ್ಚು ಭಕ್ತರು ಜಮಾಯಿಸಿದ್ದ ಕುರುಗೋಡಿನ ಜಾತ್ರೆಯಲ್ಲಿ ಚಕ್ರಕ್ಕೆ ಸಿಲುಕಿ ಯುವಕ ಸಾವಿಗೀಡಾಗಿದ್ದಾನೆ.
ಜಾತ್ರಾ ಮಹೋತ್ಸವ ಅಂದ್ರೆ ಬಳ್ಳಾರಿ ಜನ ಒಂದು ಕ್ಷಣ ಬೆಚ್ಚಿಬೀಳುತ್ತಿದ್ದಾರೆ. ನಮ್ಮೂರಿನ ಜಾತ್ರೆಗಳಲ್ಲಿ ಮತ್ತೇನು ಅವಘಡ ನಡೆಯುತ್ತೋ ಅನ್ನೋ ಸಣ್ಣ ಬೇಸರ ಕಾಡಲಾರಂಭಿಸಿದೆ. ಇದಕ್ಕೆ ಕಾರಣ ಇತ್ತೀಚಿಗಷ್ಟೇ ಶ್ರೀ ಗುರುಕೊಟ್ಟೂರೇಶ್ವರ ಜಾತ್ರೆಯ ತೇರು ಕೆಳಗೆ ಬಿದ್ದು ಅವಘಡ ಸಂಭವಿಸಿತ್ತು. ಇದೀಗ ಕುರುಗೋಡಿನ ಶ್ರೀ ದೊಡ್ಡಬಸವೇಶ್ವರ ರಥೋತ್ಸವ ಚಕ್ರಕ್ಕೆ ಸಿಲುಕಿ ಭಕ್ತನೊಬ್ಬ ಸಾವಿಗೀಡಾಗಿದ್ದಾನೆ. ಪ್ರತಿ ವರುಷ ಜಾತ್ರೆಗೆ ತಪ್ಪದೇ ಬರುತ್ತಿದ್ದ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ 25ರ ಯುವಕ ಸಿದ್ದಲಿಂಗಪ್ಪ ರಥೋತ್ಸವದಲ್ಲಿ ನೂಕಾಟದಿಂದ ಆಯತಪ್ಪಿ ರಥದ ಚಕ್ರಕ್ಕೆ ಬಿದ್ದಿದ್ದಾನೆ. ಕಾಲಿನ ಮೇಲೆ ಚಕ್ರ ಹರಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾನೆ. ಸ್ಥಳದಲ್ಲಿದ್ದ ಸ್ನೇಹಿತರು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಸಿದ್ಧಲಿಂಗಪ್ಪ ಸಾವಿಗೀಡಾಗಿದ್ದಾನೆ.
ಕುರುಗೋಡಿನ 15 ಅಡಿ ಎತ್ತರದ ಏಕ ಶಿಲಾ ನಂದಿ ವಿಗ್ರಹವಿರುವ ಶ್ರೀ ದೊಡ್ಡ ಬಸವೇಶ್ವರ ಜಾತ್ರೆಗೆ ಪ್ರತಿವರುಷವು ಹೋಳಿ ಉಣ್ಣಿಮೆ ದಿನವೆ ರಥೋತ್ಸವ ನಡೆಯುತ್ತೆ. ಇತ್ತೀಚಿಗಷ್ಟೇ ತನ್ನ ತಂದೆಯನ್ನು ಕಳೆದುಕೊಂಡು, ತಾಯಿಯನ್ನು ಸಾಕಿ ಸಲಹುತ್ತಿದ್ದ ಯುವಕ ಸಿದ್ದಲಿಂಗಪ್ಪ ಈ ಬಾರಿಯ ಕುರುಗೋಡು ಜಾತ್ರೆಯಲ್ಲಿ ಇನ್ನಿಲ್ಲದ್ದವಾಗಿದ್ದಾನೆ. ಬಳ್ಳಾರಿ ಜಿಲ್ಲೆಯಲ್ಲಿ ಜಾತ್ರೆ ಸಂದರ್ಭದಲ್ಲಿ ಮತ್ತೆ ಮತ್ತೆ ಅವಘಡಗಳು ಜರುಗುತ್ತಿರುವುದು ಜನರ ನಿದ್ದೆಗೆಡಿಸಿರೋದಂತೂ ಸತ್ಯ.
