ರಾಷ್ಟ್ರಪತಿ ಅಂಕಿತಕ್ಕೆ ಕಾದಿರುವ ಮಸೂದೆಗಳುಕರ್ನಾಟಕ ಅಕ್ರಮ ಮದ್ಯ ತಯಾರಿಕೆ, ಮಾದಕ ದ್ರವ್ಯ ಸಾಗಾಟ, ಜೂಜೂ, ಗೂಂಡಾ ಶಕ್ತಿಗಳು, ಅಕ್ರಮ ಮಾನವ ಕಳ್ಳ ಸಾಗಾಟ, ಭೂ ಒತ್ತುವರಿ, ಮಹಿಳೆಯರು ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ವಿಡಿಯೋ ಮತ್ತು ಆಡಿ ಪೈರಸಿಯಂತಹ ಅಪರಾಧ ಕೃತ್ಯಗಳ ನಿಯಂತ್ರಣ ಮಸೂದೆ-2014ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ಮಸೂದೆ-2015ಕರ್ನಾಟಕ ನೋಂದಣಿ ತಿದ್ದಪಡಿ ವಿಧೇಯಕ-2015ಕರ್ನಾಟಕ ಸ್ಟ್ಯಾಂಪ್‌ (ಎರಡನೇ ತಿದ್ದುಪಡಿ) ಮಸೂದೆ-2015ಕರ್ನಾಟಕ ಮಕ್ಕಳ ಉಚಿತ ಶಿಕ್ಷಣ ಹಾಗೂ ಶಿಕ್ಷಣ ಹಕ್ಕು ತಿದ್ದುಪಡಿ ಮಸೂದೆ-2015ಕರ್ನಾಟಕ ಕಡಲತೀರ ಮಂಡಳಿ ಮಸೂದೆ-2015ಕರ್ನಾಟಕ ಲಿಂಗಾಂತರ ಹಾಗೂ ಅನುವಂಶಿಕ ಮಾರ್ಪಾಟಿತ ಹತ್ತಿ ಬೀಜ (ಮಾರಾಟ ದರ ನಿಗದಿ ಹಾಗೂ ಪರಿಹಾರ ಧನ) ಮಸೂದೆ-2015ಕರ್ನಾಟಕ ಸಾರ್ವಜನಿಕ ಹಂಚಿಕೆಯಲ್ಲಿ ಪಾರದರ್ಶಕತೆ ಮಸೂದೆ-2016ಕರ್ನಾಟಕ ಬಾಲ್ಯ ವಿವಾಹ ನಿರ್ಮೂಲನಾ ತಿದ್ದುಪಡಿ ವಿಧೇಯಕ-2016
ಬೆಂಗಳೂರು (ಫೆ.06): ಬಿಬಿಎಂಪಿ ತ್ರಿಭಜನೆಗೆ ಮರು ಜೀವ ನೀಡಲು ಸಜ್ಜಾಗಿರುವ ರಾಜ್ಯ ಸರ್ಕಾರ, ಈ ಸಂಬಂಧ ವಿಧಾನ ಮಂಡಲದಿಂದ ಒಪ್ಪಿತ ರೂಪದಲ್ಲಿರುವ ಕಾಯ್ದೆಗೆ ಅನುಮೋದನೆ ನೀಡುವಂತೆ ಜನವರಿ 31ರಂದು ಕೇಂದ್ರ ಗೃಹ ಇಲಾಖೆಗೆ ಮತ್ತೊಂದು ಪತ್ರ ಬರೆದಿದೆ.
ಬಿಬಿಎಂಪಿ ತ್ರಿಭಜನೆ ಕುರಿತಂತೆ ಕೇಂದ್ರ ಗೃಹ ಇಲಾಖೆಗೆ ಈವರೆಗೆ 10 ಬಾರಿ ಜ್ಞಾಪನಾ ಪತ್ರ ಹಾಗೂ ಸ್ಪಷ್ಟೀಕರಣ ಬರೆದಿದ್ದು, ಈಗ 11ನೇ ಬಾರಿ ಕೇಂದ್ರ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ರಾಜ್ಯ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಸ್ಪಷ್ಟೀಕರಣ ಸಮೇತ ಪತ್ರ ಬರೆದಿದ್ದಾರೆ.
ಇದಲ್ಲದೆ ಕರ್ನಾಟಕ ವಿಧಾನಮಂಡಲದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 9 ಮಹತ್ವದ ಮಸೂದೆಗಳು ರಾಷ್ಟ್ರಪತಿಗಳ ಅಂಕಿತಕ್ಕೆ ಕಾದಿವೆ. ಈ ಪೈಕಿ ಬಿಬಿಎಂಪಿ ತ್ರಿಭಜನೆ ಮಸೂದೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. 2015ರಲ್ಲಿ ಬಿಬಿಎಂಪಿಗೆ ನಡೆದ ಚುನಾವಣೆ ವೇಳೆ ತ್ರಿಭಜನೆ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ನಡುವೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಗೃಹ ಇಲಾಖೆ ನಡುವೆ 20ಕ್ಕೂ ಹೆಚ್ಚು ಸಲ ಪತ್ರ ವ್ಯವಹಾರ ನಡೆದಿದೆ. ಕೇಂದ್ರ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಇಲಾಖೆಯೂ ಸೇರಿದಂತೆ ಕೇಂದ್ರ ಸರ್ಕಾರದ ಮೂರ್ನಾಲ್ಕು ಇಲಾಖೆಗಳು ಕೇಂದ್ರ ಗೃಹ ಇಲಾಖೆ ಮುಖಾಂತರ ಕೇಳಿರುವ ಎಲ್ಲಾ ಸ್ಪಷ್ಟೀಕರಣಗಳನ್ನು ಕೇಂದ್ರಕ್ಕೆ ಒದಗಿಸಿದೆ.
ಅಂತಿಮವಾಗಿ ಮೂರು ದಿನಗಳ ಹಿಂದೆ ರಾಜ್ಯದ ಕಾನೂನು ಇಲಾಖೆ ಕಾರ್ಯದರ್ಶಿ ದ್ವಾರಕನಾಥ್ಬಾಬು 11ನೇ ಸಲ ಪತ್ರ ಬರೆದಿದ್ದು, ಕೇಂದ್ರ ಸರ್ಕಾರ ಕೋರಿದ್ದ ಎಲ್ಲಾ ಮಾಹಿತಿ ಒದಗಿಸಿದ್ದಾರೆ. ಈ ಬಾರಿಯಾದರೂ ಗೃಹ ಇಲಾಖೆ ರಾಷ್ಟ್ರಪತಿಗಳ ಅಂಕಿತಕ್ಕೆ ಮಸೂದೆಯನ್ನು ರವಾನಿಸಲಿದೆ ಎಂಬ ನಿರೀಕ್ಷೆ ರಾಜ್ಯ ಸರ್ಕಾರಕ್ಕಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸಿತ್ವಕ್ಕೆ ಬಂದು ಬರುವ ಮೇ ತಿಂಗಳಿಗೆ ನಾಲ್ಕು ವರ್ಷ ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ರಾಜ್ಯ ವಿಧಾನಮಂಡಲದಲ್ಲಿ ಅಂಗೀಕಾರಗೊಂಡು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳ ಅಂಕಿತಕ್ಕೆ ಸಲ್ಲಿಕೆಯಾದ ಒಟ್ಟು 120 ವಿಧೇಯಕಗಳ ಪೈಕಿ 111ಕ್ಕೆ ರಾಷ್ಟ್ರಪತಿಗಳ ಅಂಕಿತ ದೊರಕಿದೆ.
2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಜಾರಿಗೊಳಿಸಲು ಮುಂದಾಗಿದ್ದ ಸರ್ಕಾರಿ ಟೆಂಡರ್ಗಳಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದ ವ್ಯಕ್ತಿಗಳಿಗೆ ಮೀಸಲಾತಿ ನೀಡುವ ಕರ್ನಾಟಕ ಸಾರ್ವಜನಿಕ ಹಂಚಿಕೆಯಲ್ಲಿ ಪಾರದರ್ಶಕತೆ ಮಸೂದೆ ಮತ್ತು ಬಾಲ್ಯ ವಿವಾಹಕ್ಕೆ ಮುಂದಾಗುವ ಪಾಲಕರಿಗೆ ಜೈಲು ಶಿಕ್ಷೆ ವಿಧಿಸುವ ಕರ್ನಾಟಕ ಬಾಲ್ಯ ವಿವಾಹ ನಿರ್ಮೂಲನಾ ತಿದ್ದುಪಡಿ ವಿಧೇಯಕಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿತ್ತು.
ಮುಂದಿನ ವಿಧಾನಸಭೆ ಚುನಾವಣೆಗೆ 15 ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಅಂಕಿತಕ್ಕೆ ಕಾದಿರುವ 9 ಮಸೂದೆಗಳಿಗೆ ಒಪ್ಪಿಗೆ ಪಡೆಯಲೇಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕಿದೆ.
ಈ ಹಿನ್ನೆಲೆಯಲ್ಲಿ ಈ ಎಲ್ಲಾ 9 ಮಸೂದೆಗಳಿಗೆ ಕೇಂದ್ರ ಗೃಹ ಇಲಾಖೆ ಕೇಳಿರುವ ಸ್ಪಷ್ಟೀಕರಣಗಳನ್ನು ರಾಜ್ಯ ಸರ್ಕಾರ ನೀಡುತ್ತ ಬಂದಿದೆ. ಬಹುಮುಖ್ಯವಾಗಿ ಬಿಬಿಎಂಪಿ ತ್ರಿಭಜನೆ, ಸರ್ಕಾರಿ ಟೆಂಡರ್ಗಳಲ್ಲಿ ಪರಿಶಿಷ್ಟರಿಗೆ ಮೀಸಲು, ಬಾಲ್ಯ ವಿವಾಹಕ್ಕೆ ಕಾರಣರಾಗುವ ಪಾಲಕರಿಗೆ ಜೈಲು ಶಿಕ್ಷೆ ಮತ್ತು ಅಕ್ರಮ ಮದ್ಯ ಮತ್ತು ಸರ್ಕಾರಿ ಭೂ ಅತಿಕ್ರಮಣಕಾರರ ವಿರುದ್ಧ ಗೂಂಡಾ ಕಾಯ್ದೆ ಬಳಕೆಯಂತಹ ಜನಪ್ರಿಯ ಶಾಸನಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ತೀವ್ರ ಪ್ರಯತ್ನ ಆರಂಭಿಸಿದೆ. ಆದರೆ, ಕೇಂದ್ರ ಸರ್ಕಾರದಿಂದ ಇನ್ನೂ ಪೂರಕ ಸ್ಪಂದನೆ ದೊರಕದಿರುವುದು ಸಮಸ್ಯೆಯಾಗಿದೆ.
