ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅನ್ನಭಾಗ್ಯ, ಬಿಸಿಯೂಟ ಸೇರಿದಂತೆ ವಿವಿಧ ಯೋಜನೆಯ ಪಡಿತರ ಆಹಾರ ಧಾನ್ಯಗಳ ಸರಬರಾಜು ಮಾಡುವ ಸಾವಿರಾರು ಲಾರಿಗಳು ಎರಡು ದಿನಗಳಿಂದ ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಿಂದ ರಾಜ್ಯದ ‘ಅನ್ನಭಾಗ್ಯ’ ಫಲಾನುಭವಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬೆಂಗಳೂರು (ನ.06): ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅನ್ನಭಾಗ್ಯ, ಬಿಸಿಯೂಟ ಸೇರಿದಂತೆ ವಿವಿಧ ಯೋಜನೆಯ ಪಡಿತರ ಆಹಾರ ಧಾನ್ಯಗಳ ಸರಬರಾಜು ಮಾಡುವ ಸಾವಿರಾರು ಲಾರಿಗಳು ಎರಡು ದಿನಗಳಿಂದ ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಿಂದ ರಾಜ್ಯದ ‘ಅನ್ನಭಾಗ್ಯ’ ಫಲಾನುಭವಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬೆಂಗಳೂರಿನ ವೈಟ್‌ಫೀಲ್ಡ್ ಬಳಿಯಿರುವ ಎರಡು ಆಹಾರ ನಿಗಮದ ಗೋದಾಮುಗಳು ಹಾಗೂ ಇತರೆಡೆ ಇರುವ ಉಗ್ರಾಣಗಳಿಂದ ಅನ್ನಭಾಗ್ಯ, ಬಿಸಿಯೂಟ ಸೇರಿದಂತೆ ವಿವಿಧ ಯೋಜನೆಗಳಿಗೆ ಪ್ರತಿ ತಿಂಗಳು ೨ ಲಕ್ಷ ಟನ್ ಆಹಾರ ಸರಬರಾಜಾಗುತ್ತದೆ. ಈ ಪೈಕಿ 1.20 ಲಕ್ಷ ಟನ್ ಅಕ್ಕಿ, 30 ಸಾವಿರ ಟನ್ ಗೋಧಿ, 15 ಸಾವಿರ ಟನ್ ಸಕ್ಕರೆ, 20 ಸಾವಿರ ಟನ್ ರಾಗಿ ಪೂರೈಕೆ ಮಾಡಲಾಗುತ್ತದೆ. ಇದೀಗ ಮುಷ್ಕರ ಕೈಗೊಂಡಿರುವ ಲಾರಿಗಳಿಂದ ರಾಜ್ಯಾದ್ಯಂತ ಆಹಾರ ಧಾನ್ಯಗಳ ಕೊರತೆ ಉಂಟಾಗಿದೆ.
ಶನಿವಾರದಿಂದ ಆರಂಭವಾಗಿರುವ ಮುಷ್ಕರಿಂದ ರಾಜ್ಯ ಸರ್ಕಾರಿ ಶಾಲೆಗಳು, ವಸತಿ ನಿಲಯಗಳು, ಅಲ್ಪಸಂಖ್ಯಾತ ವಸತಿ ನಿಲಯಗಳು, ನ್ಯಾಯಬೆಲೆ ಅಂಗಡಿ, ಪೊಲೀಸ್ ವಸತಿ ನಿಲಯಗಳಿಗೆ ಆಹಾರ ಧಾನ್ಯಗಳು ಸರಬರಾಜಾಗುತ್ತಿಲ್ಲ. ಉತ್ತರ ಕರ್ನಾಟಕ, ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಶಾಲೆ, ವಸತಿ ನಿಲಯಗಳಲ್ಲಿ ಆಗಾಗಲೇ ಆಹಾರಧಾನ್ಯಗಳ ಕೊರತೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ದ್ವಿಗುಣಗೊಳ್ಳಲಿದೆ. ಹೀಗಾಗಿ ಸರ್ಕಾರ ಕೂಡಲೇ ಲಾರಿ ಮಾಲೀಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ವಸತಿ ನಿಲಯಗಳ ಮೇಲ್ವಿಚಾರಕರು, ಶಾಲಾ ಪ್ರಾಂಶುಪಾಲರು ಕೇಳಿಕೊಂಡಿದ್ದಾರೆ.
ಪ್ರತಿಭಟನೆ ಏಕೆ?
ಕೇಂದ್ರ ಸರ್ಕಾರ ಪ್ರತಿ ಟನ್‌ಗೆ ಟ್ರಾನ್ಸ್‌ಪೋರ್ಟ್ ಶುಲ್ಕವಾಗಿ ರೂ.76.50 ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ಅದರಲ್ಲಿಯೂ ಕಡಿತಗೊಳಿಸಿ ಕೇವಲ ರೂ.36.60 ನೀಡುವ ಮೂಲಕ ತಾರತಮ್ಯ ಎಸಗುತ್ತಿದೆ. ಆದರೆ, ಅದನ್ನೂ ಕಳೆದ 6 ತಿಂಗಳಿನಿಂದ ನೀಡಿಲ್ಲ.
ನಿಯಮದ ಪ್ರಕಾರ ಲೋಡಿಂಗ್ ಅನ್ನು ಸರ್ಕಾರವೇ ಮಾಡಬೇಕು. ಆದರೆ, ಮಾಡುತ್ತಿಲ್ಲ. ಹೀಗಾಗಿ ಸರ್ಕಾರ ಲೋಡಿಂಗ್‌ಗೆ ರೂ.14 ನೀಡಬೇಕು ಎಂದು ಒಪ್ಪಂದವಾಗಿದೆ. ಆದರೆ, ಇದೀಗ ಕೇವಲರೂ.5 ಮಾತ್ರ ನೀಡುತ್ತಿದೆ. ಇದನ್ನೂ ೨೦೧೨-೧೩ರಿಂದ ಇಲ್ಲಿವರೆಗೂ ನೀಡಿಲ್ಲ ಎಂದು ಲಾರಿ ಮಾಲೀಕರ ಸಂಘ ಆರೋಪಿಸಿದೆ.
ಸಾಗಣೆ ಗುತ್ತಿಗೆಯ ಅವಧಿಯು 2017ರ ಮಾ.1ಕ್ಕೆ ಕೊನೆಗೊಳ್ಳಲಿದ್ದು, ಶೇ.60 ರಷ್ಟು ಎಲ್ಲ ಶುಲ್ಕಗಳನ್ನು ಹೆಚ್ಚಿಸಿ ಮಾ.2 ರಿಂದಲೇ ಜಾರಿಗೆ ಬರುವಂತೆ ಆದೇಶ ನೀಡಬೇಕು. ಟೆಂಡರ್ ಅವಧಿ ಮುಗಿದ ನಂತರ ಮರು ಟೆಂಡರ್ ಕರೆಯಬೇಕು. ಬಾಕಿ ಉಳಿಸಿಕೊಂಡಿರುವ ರೂ.180 ಕೋಟಿ ಸಾಗಣೆ ವೆಚ್ಚ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸವವರೆಗೂ ತಮ್ಮ ನಿರ್ಧಾರ ಸಡಿಲಿಸದಿರಲು ಸಂಘ ನಿರ್ಧರಿಸಿದೆ.
ಲಾರಿ ಮಾಲೀಕರ ಸಂಘದ ಜತೆ ಸರ್ಕಾರ ಮಾತುಕತೆ ನಡೆಸಬೇಕು. ಬಾಕಿಯಿರುವ ರೂ.180 ಕೋಟಿ ಬಿಡುಗಡೆ ಮಾಡಬೇಕು. ಒಪ್ಪಂದದಂತೆ ಲೋಡಿಂಗ್ ಶುಲ್ಕ ರೂ ಕೊಡಬೇಕು. ಬೇಡಿಕೆ ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ. ಒಂದು ವೇಳೆ ಸರ್ಕಾರ ಮಾತುಕತೆಗೆ ಕರೆದರೆ ಹೋಗುತ್ತೇವೆ.
- ನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿ, ಆಲ್ ಇಂಡಿಯಾ ರೋಡ್ ಟ್ರಾನ್ಸ್‌ಪೋರ್ಟ್
