ಬಳ್ಳಾರಿ ಎಸ್‌ಪಿ ಆರ್.ಚೇತನ್, ಕೂಡ್ಲಿಗಿ ಡಿವೈಎಸ್‌ಪಿ ಸವಿಶಂಕರ್ ನಾಯ್ಕ್, ತೋರಣಗಲ್ ಪಿಎಸ್‌ಐ ಸಂಡೂರು ಪಿಎಸ್‌ಐ ಸೇರಿದಂತೆ ಹಲವು ಅಧಿಕಾರಿಗಳ ಮೇಲೆ ಬಳ್ಳಾರಿ ಶಾಸಕ ಅನಿಲ್ ಲಾಡ್ ಇದೀಗ ದೂರು ದಾಖಲಿಸಿ, ಕೋರ್ಟ್ ಕಟಕಟೆಗೆ ಎಳೆದಿದ್ದಾರೆ.

ಬಳ್ಳಾರಿ(ಅ. 29): ಸರ್ಚ್ ವಾರೆಂಟ್ ಇಲ್ಲದೇ ತನ್ನ ರೆಸಾರ್ಟ್ ಪರಿಶೀಲಿಸಿದ ಕಾರಣ ಪೊಲೀಸ್ ಇಲಾಖೆಯ ವಿರುದ್ಧ ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಂಡೂರಿನ ಬಳಿಯಿರುವ ಅನಿಲ್ ಲಾಡ್ ಒಡೆತನದ ಅಮೇಜಿಂಗ್ ವ್ಯಾಲಿ ರೆರ್ಸಾಟ್‌'ನಲ್ಲಿ ಇಸ್ಪೀಟ್ ಜೂಜು ನಡೆಯುತ್ತಿದೆ ಎಂದು ಎಸ್‌'ಪಿಗೆ ದೂರು ಬಂದಿತ್ತು. ಹೀಗಾಗಿ ಕೂಡ್ಲಿಗಿ ಡಿವೈಎಸ್‌ಪಿ ನೇತೃತ್ವದ ತಂಡ ರೆಸಾರ್ಟ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿತ್ತು. ಆದ್ರೆ ಪರಿಶೀಲನೆ ನಂತರ ಅದೊಂದು ಹುಸಿ ಕರೆ ಎಂಬುದು ಪೊಲೀಸ್ ಅಧಿಕಾರಿಗಳಿಗೆ ಅರಿವಾಗಿದೆ.

ತಮ್ಮ ಒಡೆತನದ ರೆಸಾರ್ಟ್ ಮೇಲೆ ವಾರೆಂಟ್ ಇಲ್ಲದೆ ದಾಳಿ ಮಾಡಿ ಪೊಲೀಸ್ ಅಧಿಕಾರಿಗಳು ದಾಂಧಲೆ ಮಾಡಿದ್ದಾರೆಂದು ಶಾಸಕ ಅನಿಲ್ ಲಾಡ್ ಕೂಡ್ಲಿಗಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಾಧೀಶರು ನವಂಬರ್ 4 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಬಳ್ಳಾರಿ ಎಸ್‌ಪಿ ಆರ್.ಚೇತನ್, ಕೂಡ್ಲಿಗಿ ಡಿವೈಎಸ್‌ಪಿ ಸವಿಶಂಕರ್ ನಾಯ್ಕ್, ತೋರಣಗಲ್ ಪಿಎಸ್‌ಐ ಸಂಡೂರು ಪಿಎಸ್‌ಐ ಸೇರಿದಂತೆ ಹಲವು ಅಧಿಕಾರಿಗಳ ಮೇಲೆ ಬಳ್ಳಾರಿ ಶಾಸಕ ಅನಿಲ್ ಲಾಡ್ ಇದೀಗ ದೂರು ದಾಖಲಿಸಿ, ಕೋರ್ಟ್ ಕಟಕಟೆಗೆ ಎಳೆದಿದ್ದಾರೆ. ಸ್ಪೀಕರ್ ಬಳಿಯೂ ಸಹ ಹಕ್ಕುಚ್ಯುತಿ ಮಂಡನೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.